

ಬೆಂಗಳೂರು: ನಗರದ ಡಿಆರ್‌ಡಿಒ (DRDO) ಕ್ಯಾಂಪಸ್‌ನಿಂದ 21 ಬೀದಿ ನಾಯಿಗಳು ನಾಪತ್ತೆಯಾಗಿರುವ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಇದೇ ವೇಳೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಡಿಆರ್‌ಡಿಒನ ಇಬ್ಬರು ಅಧಿಕಾರಿಗಳಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದೂ ತನಿಖಾ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, ಈ ಹಿಂದೆ ಮಾರ್ಚ್ 25ರಂದು ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಡಿಆರ್‌ಡಿಒ ಎಸ್ಟೇಟ್ ಮ್ಯಾನೇಜರ್ ರಾಕೇಶ್ ಕುಮಾರ್ ಸಾಹು ಮತ್ತು ಕ್ಲೀನಿಂಗ್ ಸೂಪರ್‌ವೈಸರ್ ಟಿ.ಜಿ. ಸುಧಾಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಂಡಿದೆ.
ಪ್ರಕರಣದ ತನಿಖೆ ಅಗತ್ಯವಾಗಿದ್ದು, ತನಿಖೆಯಿಂದ ಹೊರಬರುವ ನಿಜಾಂಶಗಳ ಆಧಾರದ ಮೇಲೆ ಮಾತ್ರ ಅಪರಾಧಗಳ ಸ್ವರೂಪ ನಿರ್ಧಾರವಾಗಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅರ್ಜಿದಾರ ಅಧಿಕಾರಿಗಳಿಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಆದರೆ, ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಿದೆ. ಅಲ್ಲದೆ, ತನಿಖೆಯನ್ನು ಆರು ವಾರಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.
ಮಾರ್ಚ್ 9ರಂದು ಡಿಆರ್‌ಡಿಒ ಕ್ಯಾಂಪಸ್‌ನ ಒಳ ರಸ್ತೆಗಳಲ್ಲಿದ್ದ 21 ಬೀದಿ ನಾಯಿಗಳನ್ನು ಅನೈತಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ನಾಯಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಅರ್ಜಿದಾರರ ಪರ ವಕೀಲರು, ಡಿಆರ್‌ಡಿಒ ಕ್ಯಾಂಪಸ್‌ಗೆ ಯಾರು ಪ್ರವೇಶಿಸಿ ನಾಯಿಗಳನ್ನು ಕೊಂಡೊಯ್ದರು ಎಂಬುದರ ಬಗ್ಗೆ ತನಿಖೆ ನಡೆಯಬೇಕು. ನಾಯಿಗಳ ನಾಪತ್ತೆಗೆ ನಮ್ಮ ಕಕ್ಷಿದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ವಾದಿಸಿದರು.
ಇನ್ನೊಂದೆಡೆ, ಪ್ರಾಣಿ ಕಲ್ಯಾಣ ಸಂಘಟನೆ ಪರ ವಕೀಲರಾದ ವೈಶಾಲಿ ಹೆಗಡೆ, ಡಿಆರ್‌ಡಿಒ ಕ್ಯಾಂಪಸ್‌ಗೆ ಅನುಮತಿ ಇಲ್ಲದೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ಅಗತ್ಯ ಎಂದು ನ್ಯಾಯಾಲಯದ ಗಮನ ಸೆಳೆದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ತನಿಖೆಗೆ ಅನುಮತಿ ನೀಡಿ ಮುಂದಿನ ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿತು.
Advertisement