ಬೆಂಗಳೂರಿನ ತ್ರೀ ಲೇನ್ ಸುರಂಗ ರಸ್ತೆ ಕಾಮಗಾರಿ: ಗುದ್ದಲಿ ಪೂಜೆ ನೆರವೇರಿಸಿದ CM ಡಿ ಕೆ ಶಿವಕುಮಾರ್, ಇದರ ವೈಶಿಷ್ಟ್ಯತೆಯೇನು?-Video

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಗೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ.
Chief Minister D.K. Shivakumar laid the foundation stone for the construction of the tunnel road from Mekhri Circle to Hebbal Junction at Hebbal Junction
ಬೆಂಗಳೂರಿನ ಸುರಂಗ ಮಾರ್ಗ ಯೋಜನೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ
Updated on

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಭಾನುವಾರ ರಾಜಧಾನಿ ಬೆಂಗಳೂರಿನ ಬಹುಚರ್ಚಿತ ಸುರಂಗ ರಸ್ತೆ (Tunnel Road) ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವೆಂದು ಬಿಂಬಿಸಲಾಗುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಯು ಹೆಬ್ಬಾಳವನ್ನು ಸಿಲ್ಕ್ ಬೋರ್ಡ್‌ನೊಂದಿಗೆ ಸಂಪರ್ಕಿಸಲಿದ್ದು, ಇದರ ಅಂದಾಜು ವೆಚ್ಚ 17,000 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಗೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ. ಹೆಬ್ಬಾಳ ಫ್ಲೈಓವರ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿ ಗೃಹದವರೆಗೆ ನಿರ್ಮಿಸಲಿರುವ 3 ಪಥಗಳ ಅವಳಿ ಸುರಂಗ ಮಾರ್ಗ ಇದಾಗಿದೆ.

1,139 ಕೋಟಿ ರೂಪಾಯಿ ವೆಚ್ಚದ ಕಿರಿದಾದ ಸುರಂಗ ಮಾರ್ಗಕ್ಕೆ ಡಿ.ಕೆ. ಶಿವಕುಮಾರ್ ಅವರು ಇಂದು ಗುದ್ದಲಿಯಲ್ಲಿ ಅಗೆಯುವ ಮೂಲಕ ಟನಲ್ ರಸ್ತೆ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಸಾರಿಗೆ ಸಚಿವ ಭೈರತಿ ಸುರೇಶ್, ಇಂಧನ ಸಚಿವ ಕೆ.ಜೆ.ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಉಪಸ್ಥಿತರಿದ್ದರು.ಗುದ್ದಲಿ ಪೂಜೆ ಬಳಿಕ ಸಿಎಂ ಡಿಕೆಶಿ ಯೋಜನೆ ರೂಪುರೇಷೆ ವೀಕ್ಷಿಸಿದರು. ಅಧಿಕಾರಿಗಳಿಂದ ಪೂರ್ತಿ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್, ಬೆಂಗಳೂರಿಗೆ ಹೆಬ್ಬಾಳ ಹೆಬ್ಬಾಗಿಲಿನಂತೆ ಆಗಿದೆ. ಈ ಭಾಗದ ಸಂಚಾರ ದಟ್ಟಣೆಗೆ ಒಂದಷ್ಟು ಮುಕ್ತಿ ನೀಡಿದ್ದೇವೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

2.5 ಕಿಲೋ ಮೀಟರ್ ಉದ್ದದ ಕಟ್ ಅಂಡ್ ಕವರ್ ಟನಲ್ ಇದಾಗಿದ್ದು, ಇದು ಟೋಲ್ ಮುಕ್ತವಾಗಿರಲಿದೆ. ಬಿಡಿಎ ಅವರೇ ತಮ್ಮ ಸಂಪತ್ತು, ಹಣದ ಮೂಲಕ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಜನರ ಬದುಕಿನಲ್ಲಿ ಬದಲಾವಣೆ ತರಲು ಹುಮ್ಮಸ್ಸಿನಿಂದ ನಾವು ಕೆಲಸ ಮಾಡುತ್ತಿದ್ದೇವೆ.

ಮುಂದಿನ 50 ವರ್ಷಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಹೆಬ್ಬಾಳದಿಂದ ಮೇಲೆ ಕಾವೇರಿ ನೀರು ನೀಡಲು ಅನುಮತಿ ಇರಲಿಲ್ಲ‌. ಈ ಮೇಕೆದಾಟು ಯೋಜನೆಗೆ ಸಂಬಂಧ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೆವು. ಇದಕ್ಕೆ ಫಲ ಸಿಕ್ಕಿದೆ ಎಂದರು.

ಈ ಯೋಜನೆಯು ಸುಧಾರಿತ ಎಂಜಿನಿಯರಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಬೆಂಗಳೂರಿನ ಉತ್ತರದ ಕಡೆಗೆ, ವಿಶೇಷವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವಕ್ಕೆ ಕೆ.ಆರ್. ಪುರಂ ಕಡೆಗೆ ಸಂಚಾರ ಸಂಪರ್ಕವನ್ನು ಸುಧಾರಿಸಲು ನಿರ್ಣಾಯಕವಾಗಿದೆ. ಸುರಂಗ ರಸ್ತೆ ನಿರ್ಮಾಣವು ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುತ್ತದೆ.

ನಿನ್ನೆ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದ ಸಾರಿಗೆ ಸಚಿವ ಹಾಗೂ ಹೆಬ್ಬಾಳ ಶಾಸಕ ಭೈರತಿ ಸುರೇಶ್, 2.18 ಕಿಲೋಮೀಟರ್ ಉದ್ದದ ಈ ಸುರಂಗ ಮಾರ್ಗವು ಮೇಖ್ರಿ ವೃತ್ತ ಮತ್ತು ಹೆಬ್ಬಾಳ ಜಂಕ್ಷನ್ ನಡುವಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ತಿಳಿಸಿದರು. ಈ ಘೋಷಣೆ, ಸುರಂಗ ನಿರ್ಮಾಣದ ಟೆಂಡರ್ ಖಾಸಗಿ ಸಂಸ್ಥೆಯೊಂದಕ್ಕೆ ಲಭಿಸಿದ ಕೆಲವೇ ದಿನಗಳ ನಂತರ ಹಾಗೂ ಯುಎಎಸ್ ಸಿಬ್ಬಂದಿ ವಸತಿ ಗೃಹ ಮತ್ತು ಸುತ್ತಮುತ್ತ ಮಣ್ಣಿನ ಪರೀಕ್ಷೆ ನಡೆಸಿದ ಬೆನ್ನಲ್ಲೇ ಹೊರಬಿದ್ದಿದೆ.

ಹೆಬ್ಬಾಳ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆ ಇರುವುದರಿಂದ ವಿಮಾನ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಿಗೆ ತೆರಳುವುದು ಕಷ್ಟವಾಗುತ್ತಿತ್ತು. ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಸುರಂಗ ರಸ್ತೆ ನಿರ್ಮಿಸಲು ನಿರ್ಧರಿಸಿದೆ ಎಂದು ಭೈರತಿ ಸುರೇಶ್ ಹೇಳಿದರು.

ಟೆಂಡರ್ ಪಡೆದ ಸಂಸ್ಥೆಯಿಂದ ವಿಳಂಬ ಅಥವಾ ಬೇರೆ ಯಾವುದೇ ನೆಪಗಳು ಬರದಂತೆ ನೋಡಿಕೊಳ್ಳಲು, ನಿಗದಿತ ಅವಧಿಯೊಳಗೆ ಕಾಮಗಾರಿ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ವಿರೋಧ ಪಕ್ಷಗಳು ಕೇವಲ ವಿರೋಧಿಸುವ ಉದ್ದೇಶದಿಂದಲೇ ಈ ಯೋಜನೆಯನ್ನು ವಿರೋಧಿಸುತ್ತಿವೆ. ಲಕ್ಷಾಂತರ ಜನರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಟನಲ್ ರಸ್ತೆಯ ವೈಶಿಷ್ಟ್ಯ

ಈ ಕಿರಿದಾದ ಸುರಂಗ ಮಾರ್ಗದ ಒಟ್ಟು ಉದ್ದ 2.228 ಕಿಲೋಮೀಟರ್ ಆಗಿದ್ದು, ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ ಸಿಬ್ಬಂದಿ ವಸತಿ ಗೃಹದವರೆಗೆ ಸಂಪರ್ಕ ಕಲ್ಪಿಸಲಿದೆ.

ಭೂಮಿಯ ಮೇಲ್ಮೈಯಿಂದ ಸುಮಾರು 60 ಅಡಿ ಆಳದಲ್ಲಿ ನಿರ್ಮಾಣವಾಗಲಿರುವ ಈ ಸುರಂಗದಲ್ಲಿ ಆರು ಪಥಗಳ ರಸ್ತೆ ಇರಲಿದೆ. ಪ್ರತಿ ಪಥವು 3.5 ಮೀಟರ್ ಅಗಲ ಹೊಂದಿರಲಿದೆ.

18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ

ವರದಿಗಳ ಪ್ರಕಾರ, 1,139 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯನ್ನು 18 ತಿಂಗಳೊಳಗೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ. ಅನೇಕ ಸಾರ್ವಜನಿಕ ಯೋಜನೆಗಳಂತೆ ಖಾಸಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಗತ್ಯ ಈ ಯೋಜನೆಗೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com