SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್

ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಅವರಲ್ಲಿ 91.91 ಶೇಕಡಾ ಮಂದಿಯ ಮಾಹಿತಿ ಈಗಾಗಲೇ ಮ್ಯಾಪ್ ಆಗಿದೆ.
SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್
Updated on

ಬೆಂಗಳೂರು: 2026ರ ಜೂನ್ 29ರ ವೇಳೆಗೆ ಕರ್ನಾಟಕದಲ್ಲಿ 46,52,504 ಮತದಾರರ ವಿವರಗಳು ಇನ್ನೂ ಪರಿಶೀಲನೆ ಅಥವಾ ಮ್ಯಾಪಿಂಗ್‌ಗೆ ಒಳಪಡಬೇಕಿದೆ. ಮ್ಯಾಪಿಂಗ್ ಆಗಿದೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಎಲ್ಲ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿದಿದ್ದು, ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದಡಿ ಅವರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ ಅನ್ಬುಕುಮಾರ್ ತಿಳಿಸಿದ್ದಾರೆ.

ಸಿಇಒ ಕಚೇರಿಯ ಅಂಕಿಅಂಶಗಳ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಕೇವಲ 6,181 ಮತದಾರರ ಮಾಹಿತಿ ಮ್ಯಾಪ್ ಆಗಿಲ್ಲ. ಇನ್ನು ಬೆಂಗಳೂರು ನಗರ, ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ ಹಾಗೂ ಬಿಬಿಎಂಪಿ ಕೇಂದ್ರ ಜಿಲ್ಲೆಗಳಲ್ಲಿ ಒಟ್ಟು 14,60,461 ಮತದಾರರ ಮಾಹಿತಿ ಮ್ಯಾಪ್ ಆಗದೆ ಅತಿ ಹೆಚ್ಚು ಸಂಖ್ಯೆಯಲ್ಲಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಅವರಲ್ಲಿ 91.91 ಶೇಕಡಾ ಮಂದಿಯ ಮಾಹಿತಿ ಈಗಾಗಲೇ ಮ್ಯಾಪ್ ಆಗಿದೆ.

ಜೂನ್ 30ರಿಂದ ಜುಲೈ 29, 2026ರವರೆಗೆ ನಡೆಯುವ ಮನೆ-ಮನೆ ಭೇಟಿ ವೇಳೆ ಭಾಗಶಃ ಪೂರ್ವಭರ್ತಿ ಮಾಡಲಾದ ವೈಯಕ್ತಿಕಗೊಳಿಸಿದ (ಕಸ್ಟಮೈಸ್ ಮಾಡಿದ) ಗಣತಿ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಲ್ಲಿಸುವಾಗ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ಆಗಸ್ಟ್ 25, 2026ರಿಂದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ಕುರಿತು ಸಂಬಂಧಿತ ಮತದಾರರಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಸಾಧ್ಯವಾದರೆ ಮತದಾರರು ತಕ್ಷಣವೇ ನಮೂನೆಯನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡಬಹುದು. ಇಲ್ಲವಾದರೆ, ನಮೂನೆಯಲ್ಲಿ ನೀಡಿರುವ ಹೆಸರು ಮತ್ತು ಸಂಪರ್ಕ ಸಂಖ್ಯೆಯ ಮೂಲಕ ಬಿಎಲ್‌ಒಗಳನ್ನು ಸಂಪರ್ಕಿಸಿ ನಂತರ ಸಲ್ಲಿಸಬಹುದು. ನಾಗರಿಕರು ಆನ್‌ಲೈನ್‌ನಲ್ಲಿಯೂ ನಮೂನೆ ಸಲ್ಲಿಸಲು ಅವಕಾಶವಿದ್ದು, ಜೂನ್ 30ರಿಂದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದರು.

SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್
ಕರ್ನಾಟಕದಲ್ಲಿ SIR: ಮನೆ ಮನೆಗೆ ತೆರಳಿ ಮತದಾರರ ಗಣತಿ ಇಂದು ಆರಂಭ-Video

ಮ್ಯಾಪಿಂಗ್ ಆಗದ ಮತದಾರರ ಕುರಿತು ಸ್ಪಷ್ಟನೆ ನೀಡಿದ ಅವರು, ಆತಂಕಪಡುವ ಅಗತ್ಯವಿಲ್ಲ. 2002 ಹಾಗೂ 2025ರ ಮತದಾರರ ದತ್ತಾಂಶದ ಆಧಾರದ ಮೇಲೆ ಅವರ ಹೆಸರುಗಳು ಈಗಲೂ ಮತದಾರರ ಪಟ್ಟಿಯಲ್ಲಿವೆ. ಕರಡು ಮತದಾರರ ಪಟ್ಟಿ ಆಗಸ್ಟ್ 5ರಂದು ಪ್ರಕಟವಾಗುವವರೆಗೂ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು.

ವ್ಯತ್ಯಾಸಗಳ ಕುರಿತು ಮಾತನಾಡಿದ ಅನ್ಬುಕುಮಾರ್, ಲಿಂಗದ ದಾಖಲೆಗಳಲ್ಲಿ ತಪ್ಪು, ಹೆಸರಿನ ಕಾಗುಣಿತ ದೋಷ, ವಿಳಾಸ, ವಯಸ್ಸಿನ ತಪ್ಪು ಮಾಹಿತಿ ಅಥವಾ ಪೋಷಕರು ಮತ್ತು ಮಕ್ಕಳ ನಡುವಿನ ವಯಸ್ಸಿನ ಅಸಾಮಾನ್ಯ ಅಂತರ ಇತ್ಯಾದಿ ಕಾರಣಗಳಿಂದ ವ್ಯತ್ಯಾಸಗಳು ಉಂಟಾಗಬಹುದು ಎಂದರು.

ಪೋಷಕರು ಮತ್ತು ಮಕ್ಕಳ ನಡುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇದ್ದರೆ ಅದನ್ನು ವ್ಯತ್ಯಾಸವಾಗಿ ಗುರುತಿಸಲಾಗುತ್ತದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರವೇ ಇಂತಹ ವ್ಯತ್ಯಾಸಗಳು ಸ್ಪಷ್ಟವಾಗಲಿದ್ದು, ಅವುಗಳನ್ನು ಸರಿಪಡಿಸಲು ಸಲ್ಲಿಸಬಹುದಾದ ದಾಖಲೆಗಳ ವಿವರವನ್ನು ಗಣತಿ ನಮೂನೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿವೆ ಎಂಬ ಕಾಂಗ್ರೆಸ್ ಪಕ್ಷದ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸಿದ ಅವರು, ಎಸ್‌ಐಆರ್ ಕುರಿತು ನೋಂದಾಯಿತ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಲಾಗಿದೆ ಹಾಗೂ ವಿವಿಧ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ 1,15,112 ನೋಂದಾಯಿತ ಬೂತ್ ಮಟ್ಟದ ಏಜೆಂಟರಿಗೆ (ಬಿಎಲ್‌ಎ) ತರಬೇತಿ ನೀಡಲಾಗಿದೆ ಎಂದರು. ರಾಜಕೀಯ ಪಕ್ಷಗಳೊಂದಿಗೆ ಹಲವು ಸಭೆಗಳನ್ನು ನಡೆಸಲಾಗಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಎಸ್‌ಐಆರ್ ಪ್ರಕ್ರಿಯೆ ಜಾರಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮತದಾರರು ಸಿಗದಿದ್ದರೆ ಮನೆಗಳಿಗೆ ಸಂಪರ್ಕ ವಿವರಗಳ ಸ್ಟಿಕ್ಕರ್ ಅಂಟಿಸಲಿರುವ ಬಿಎಲ್‌ಒಗಳು

ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್ 52,419, ಬಿಜೆಪಿ 48,614, ಜೆಡಿಎಸ್ 14,020, ಬಿಎಸ್‌ಪಿ 36, ಆಮ್ ಆದ್ಮಿ ಪಕ್ಷ 18 ಹಾಗೂ ಸಿಪಿಐ(ಎಂ) 5 ಬೂತ್ ಮಟ್ಟದ ಏಜೆಂಟರನ್ನು ನೇಮಿಸಿವೆ.

ಮತದಾರರು ಮನೆಯಲ್ಲಿ ಲಭ್ಯವಿಲ್ಲದಿದ್ದರೆ ಬಿಎಲ್‌ಒಗಳು ಮೂರು ಬಾರಿ ಭೇಟಿ ನೀಡಲಿದ್ದಾರೆ. ಪ್ರತಿ ಬಾರಿ ಮನೆ ಬಾಗಿಲಿಗೆ ಭೇಟಿ ದಿನಾಂಕ ಹಾಗೂ ಬಿಎಲ್‌ಒಗಳ ಸಂಪರ್ಕ ವಿವರಗಳಿರುವ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಸುಮಾರು 1.88 ಕೋಟಿ ಸ್ಟಿಕ್ಕರ್‌ಗಳನ್ನು ಮುದ್ರಿಸಲಾಗಿದೆ ಎಂದು ಅನ್ಬುಕುಮಾರ್ ಹೇಳಿದರು.

ಬಿಎಲ್‌ಒಗಳ ವಿವರಗಳು ವೆಬ್‌ಸೈಟ್‌ನಲ್ಲಿರುವ ಮಾಹಿತಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ರಾಜಕೀಯ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಬಿಎಲ್‌ಒಗಳ ಮಾಹಿತಿಯನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿ ಅನುಮೋದಿಸಲಾಗಿದೆ ಎಂದರು.

ಕೆಲವು ಅಧಿಕಾರಿಗಳು ಅಪಘಾತ ಅಥವಾ ಇತರ ಅನಿರೀಕ್ಷಿತ ಕಾರಣಗಳಿಂದ ಬದಲಾಗಿದ್ದರೂ, ವೆಬ್‌ಸೈಟ್‌ನಲ್ಲಿರುವ ಮಾಹಿತಿ ಸರಿಯಾಗಿದೆ. ನಾಗರಿಕರು ಚುನಾವಣಾ ಆಯೋಗದ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಿಎಲ್‌ಒಗಳು, ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಹಾಗೂ ಮತಗಟ್ಟೆಗಳ ವಿವರಗಳನ್ನು ಪಡೆಯಬಹುದು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com