

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಅಂಗವಾಗಿ ಮನೆ ಮನೆಗೆ ತೆರಳಿ ಮತದಾರರ ಗಣತಿ ಕಾರ್ಯವು ಇಂದು ಜೂನ್ 30 ಮಂಗಳವಾರ ಆರಂಭವಾಗಲಿದೆ. ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ರಾಜ್ಯದ 5.54 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಳ್ಳಲಾಗುತ್ತದೆ.
ಮತದಾರರ ಪಟ್ಟಿಯನ್ನು ನವೀಕರಿಸಿ "ಶುದ್ಧೀಕರಿಸುವ" ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಈ ಕಾರ್ಯದಲ್ಲಿ 59,050 ಬೂತ್ ಮಟ್ಟದ ಅಧಿಕಾರಿಗಳು (Booth Level Officers - BLOs) ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಪ್ರತಿಯೊಬ್ಬ ನೋಂದಾಯಿತ ಮತದಾರರಿಗೆ ಗಣತಿ ನಮೂನೆಗಳನ್ನು (Enumeration Forms) ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲಿದ್ದಾರೆ.
ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಾಗುತ್ತದೆ. ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಚುನಾವಣಾ ಆಯೋಗವು 11 ಕೋಟಿ ಪೂರ್ವಭರ್ತಿ (Pre-filled) ಗಣತಿ ನಮೂನೆಗಳನ್ನು ಮುದ್ರಿಸಿದ್ದು, ಪ್ರತಿಯೊಂದು ನಮೂನೆಯಲ್ಲಿ QR ಕೋಡ್, ಮತದಾರರ ವಿವರಗಳು ಮತ್ತು ಭಾವಚಿತ್ರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
2026ರ ಜೂನ್ 16ರವರೆಗೆ ಪರಿಷ್ಕರಿಸಲಾದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಮತದಾರರಿಗೆ, ಅವರು ಈಗಾಗಲೇ ಮತದಾರರ ಡೇಟಾಬೇಸ್‌ನಲ್ಲಿ ಮ್ಯಾಪ್ ಆಗಿದ್ದಾರೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಈ ನಮೂನೆಗಳನ್ನು ವಿತರಿಸಲಾಗುತ್ತದೆ.
ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರಿಗೂ ಈ ನಮೂನೆ ನೀಡಲಾಗುತ್ತದೆ. ಮತದಾರರು ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ ಅಂಟಿಸಿ, ಸಹಿ ಮಾಡಿದ ನಮೂನೆಯನ್ನು ಜುಲೈ 29ರೊಳಗೆ ಸಲ್ಲಿಸಿದರೆ, ಆಗಸ್ಟ್ 5ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗುತ್ತದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.
ಗಣತಿ ನಮೂನೆಗಳನ್ನು ಜೂನ್ 30ರಿಂದ ECI Voters Portal ಹಾಗೂ ECINET ಮೊಬೈಲ್ ಅಪ್ಲಿಕೇಶನ್ ಮೂಲಕವೂ ಆನ್‌ಲೈನ್‌ನಲ್ಲಿ ಭರ್ತಿ ಮಾಡಬಹುದು.
ಚುನಾವಣಾ ಅಧಿಕಾರಿಗಳು, ಕುಟುಂಬದ ಯಾವುದೇ ವಯಸ್ಕ ಸದಸ್ಯರು ಮನೆಯ ಇತರ ಸದಸ್ಯರ ಪರವಾಗಿ ನಮೂನೆಗೆ ಸಹಿ ಮಾಡಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. BLO ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿವಾಸಿಗಳು ಇಲ್ಲದಿದ್ದರೆ, ಮತದಾರರು ನಂತರ ಸ್ವತಃ ಭರ್ತಿ ಮಾಡಿದ ನಮೂನೆಯನ್ನು ಸಲ್ಲಿಸಬಹುದಾಗಿದೆ.
ಪ್ರತಿ ಮನೆಗೂ ಕನಿಷ್ಠ ಮೂರು ಬಾರಿ ಭೇಟಿ ನೀಡುವಂತೆ BLOಗಳಿಗೆ ಸೂಚಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎರಡು ಬಣ್ಣದ ಸ್ಟಿಕ್ಕರ್‌ಗಳನ್ನು ಬಳಸಲಾಗುತ್ತದೆ. ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್ ಅಂಟಿಸಿರುವ ಮನೆಗೆ ಗಣತಿ ನಮೂನೆ ವಿತರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್ ಬೀಗ ಹಾಕಿರುವ ಮನೆಗಳಿಗೆ ಅಂಟಿಸಲಾಗುತ್ತದೆ. ಅದರಲ್ಲಿ ಮುಂದಿನ ಭೇಟಿ ದಿನಾಂಕ ಹಾಗೂ BLO ಅವರ ಸಂಪರ್ಕ ಸಂಖ್ಯೆಯನ್ನು ನಮೂದಿಸಲಾಗಿದ್ದು, ನಿವಾಸಿಗಳು ಸಹಾಯ ಪಡೆಯಲು ಅಥವಾ ನಮೂನೆಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ.
ಗಣತಿ ಹಂತದಲ್ಲಿ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮತದಾರರು BLO ಸಹಿ ಮಾಡಿದ ಸ್ವೀಕೃತಿ ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಸರಿಯಾಗಿ ಭರ್ತಿ ಮಾಡಿದ ಗಣತಿ ನಮೂನೆ ಸಲ್ಲಿಸಿದ ಮತದಾರರ ಹೆಸರು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
BLOಗಳು ಸಂಗ್ರಹಿಸಿದ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಿದ್ದು, ಹೆಸರು, ವಯಸ್ಸು, ಲಿಂಗ, ಸಂಬಂಧದ ವಿವರಗಳು, ಕಾಗುಣಿತದ ವ್ಯತ್ಯಾಸಗಳು, 2002ರ ಕೊನೆಯ ವಿಶೇಷ ಸಾಂದ್ರ ಪರಿಷ್ಕರಣೆಯ ದಾಖಲೆಗಳ ಅನುಪಸ್ಥಿತಿ ಅಥವಾ ಕುಟುಂಬ ಮ್ಯಾಪಿಂಗ್‌ನಲ್ಲಿನ ಅಸಾಮಾನ್ಯ ಮಾದರಿಗಳಂತಹ ತಾರ್ಕಿಕ ವ್ಯತ್ಯಾಸಗಳನ್ನು ಪರಿಶೀಲಿಸುತ್ತದೆ.
ಚುನಾವಣಾಧಿಕಾರಿ ಹೇಳುವುದೇನು?
ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಚುನಾವಣಾ ನೋಂದಣಿ ಅಧಿಕಾರಿಗಳು (Electoral Registration Officers - EROs) ನೊಟೀಸ್ ನೀಡುತ್ತಾರೆ. ನೊಟೀಸ್ ನೀಡಲಾಗಿದೆ ಎಂದರೆ ಮತದಾರರ ಹೆಸರನ್ನು ಅಳಿಸಲಾಗುತ್ತದೆ ಎಂದರ್ಥವಲ್ಲ. ಅದು ಕೇವಲ ವ್ಯತ್ಯಾಸಗಳನ್ನು ಸರಿಪಡಿಸಲು ಸ್ಪಷ್ಟೀಕರಣ ಅಥವಾ ಪೂರಕ ದಾಖಲೆಗಳನ್ನು ಕೋರುವ ಮಾಹಿತಿ ಮಾತ್ರ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಬಿಎಲ್ ಒಗಳು ನೊಟೀಸ್ ವಿತರಿಸಿ, ಮತದಾರರಿಂದ ಉತ್ತರಗಳು ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಇಆರ್ ಒಗಳು ಪರಿಶೀಲನೆಗೆ ಸಲ್ಲಿಸಲಿದ್ದಾರೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (Booth Level Agents - BLAs) ಕೂಡ ಪ್ರತಿದಿನ ನೀಡಲಾದ ನೊಟೀಸ್ ಪಟ್ಟಿಯನ್ನು ಪಡೆದು ಮತದಾರರಿಗೆ ಸಹಾಯ ಮಾಡಲಿದ್ದಾರೆ.
ಚುನಾವಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯದ 5.54 ಕೋಟಿ ಮತದಾರರಲ್ಲಿ ಸುಮಾರು 5.07 ಕೋಟಿ (91.61%) ಮತದಾರರ ಮಾಹಿತಿ ಈಗಾಗಲೇ ಮ್ಯಾಪ್ ಆಗಿದ್ದು, ಸುಮಾರು 46 ಲಕ್ಷ ಮತದಾರರ ಮಾಹಿತಿ ಇನ್ನೂ ಮ್ಯಾಪ್ ಆಗಿಲ್ಲ. ಮ್ಯಾಪ್ ಆಗದ ಮತದಾರರು ಗಣತಿ ನಮೂನೆಯನ್ನು ಭರ್ತಿ ಮಾಡಬಹುದಾಗಿದ್ದು, 2002ರ ವಿಶೇಷ ತೀವ್ರ ಪರಿಷ್ಕರಣೆಯ ದಾಖಲೆಗಳಿಂದ ಅನುಗುಣ ದಾಖಲೆಗಳನ್ನು ಪತ್ತೆಹಚ್ಚಿ, ಸಂತತಿ (Progeny) ಮ್ಯಾಪಿಂಗ್ ಹಾಗೂ ಪರಿಶೀಲನೆ ನಡೆಸಲು ಬಿಎಲ್ ಒಗಳು ನೆರವಾಗಲಿದ್ದಾರೆ.