ಹಾವೇರಿ: ಕಾರ ಹುಣ್ಣಿಮೆ, ಹೋರಿ ಓಡಿಸುವಾಗ ಘರ್ಷಣೆ, 8 ಮಂದಿಗೆ ಗಾಯ! ಸರ್ಕಾರದ ಓಲೈಕೆಯೇ ನೇರ ಹೊಣೆ ಎಂದ ವಿಪಕ್ಷ ನಾಯಕ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಒಟ್ಟು 26 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Injured Treatment at Hospital
ಗಾಯಾಳುಗಳಿಗೆ ಆಸ್ಪತ್ರೆ ಚಿಕಿತ್ಸೆ
Updated on

ಹಾವೇರಿ: ಕಾರ ಹುಣ್ಣಿಮೆ ಅಂಗವಾಗಿ ಹೋರಿ ಓಡಿಸುವಾಗ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ 8ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿರುವ ಘಟನ ಜಿಲ್ಲೆಯ ಹಾನಗಲ್ ತಾಲೂಕು ನರೇಗಲ್ ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಒಟ್ಟು 26 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘರ್ಷಣೆಯ ನಂತರ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವವರೆಗೆ ಗ್ರಾಮದಲ್ಲಿ ಸ್ವಲ್ಪ ಕಾಲ ಉದ್ವಿಗ್ನತೆ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ ಹುಣ್ಣಿಮೆ ಎಂಬುದು ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂ ಮಾಸದ ಜ್ಯೇಷ್ಠ ಹುಣ್ಣಿಮೆಯಂದು ಆಚರಿಸಲಾಗುವ ಸಾಂಪ್ರದಾಯಿಕ ಕೃಷಿ ಹಬ್ಬವಾಗಿದೆ. ಇಬ್ಬರು ವ್ಯಕ್ತಿಗಳ ನಡುವಿನ ಜಗಳವಾಗಿ ಪ್ರಾರಂಭವಾಗಿ ನಂತರ ಘರ್ಷಣೆಯಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ ಹುಣ್ಣಿಮೆ (ಹುಣ್ಣಿಮೆ ದಿನ) ಹಬ್ಬಕ್ಕಾಗಿ ಅಲಂಕೃತ ಎತ್ತುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಿದ್ದಾಗ ಮಸೀದಿಯ ಬಳಿ ಪಟಾಕಿಗಳನ್ನು ಸಿಡಿಸಲಾಗಿದೆ. ಇದು ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಮಾತಿಗೆ ಮಾತು ಬೆಳೆದು ಹೊಡೆದಾಡಿದ್ದಾರೆ. ಈ ವೇಳೆ ಹರಿತವಾದ ಆಯುಧಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘರ್ಷಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದೇವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗಳ ನಿಖರವಾದ ಮಾಹಿತಿ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತ ಮಾಹಿತಿ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ಹಿಂದೂಗಳ ಹಬ್ಬ-ಹರಿದಿನಗಳೇ ಏಕೆ ಪದೇ ಪದೇ ಟಾರ್ಗೆಟ್ ಆಗಿವೆಯೇ ಎಂಬ ಪ್ರಶ್ನೆ ಇಂದು ರಾಜ್ಯದ ಜನತೆಯನ್ನು ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಮತಾಂಧ ಕಿಡಿಗೇಡಿಗಳಿಗೆ ಆನೆ ಬಲ ಬಂದಂತಾಗಿದೆ ಎನ್ನುವುದಕ್ಕೆ ನಿನ್ನೆ ಹಾವೇರಿಯಲ್ಲಿ ನಡೆಸಿರುವ ಘಟನೆಯೇ ಸಾಕ್ಷಿ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಓಲೈಕೆ ಹಾಗೂ ತುಷ್ಟೀಕರಣ ರಾಜಕಾರಣ ಎಲ್ಲಿಗೆ ಬಂದು ತಲುಪಿದೆ ಎಂಬುದನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ ಸ್ವಾಮಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನೆಮ್ಮದಿಯಾಗಿ ಭಕ್ತಿಯಿಂದ ಗಣೇಶೋತ್ಸವ ಆಚರಿಸುವ ಹಾಗಿಲ್ಲ. ಶ್ರದ್ಧೆಯಿಂದ ದುರ್ಗಾ ಪೂಜೆಗೆ ಪೆಂಡಾಲ್ ಹಾಕುವ ಹಾಗಿಲ್ಲ. 'ಜೈ ಶ್ರೀರಾಮ್' ಎಂದರೆ ಸಾಕು ನಿಮ್ಮ ಪೊಲೀಸರು ಕ್ರಿಮಿನಲ್‌ಗಳಂತೆ ನೋಡುತ್ತಾರೆ.ಹನುಮಾನ್ ಚಾಲೀಸಾ, ಭಜನೆ ಮಾಡಿದರೆ ಮತಾಂಧ ಕಿಡಿಗೇಡಿಗಳು ಬಂದು ಹಲ್ಲೆ ನಡೆಸುತ್ತಾರೆ! ಇದೀಗ ನಮ್ಮ ಹೆಮ್ಮೆಯ ಕೃಷಿ ಸಂಸ್ಕೃತಿಯ ಭಾಗವಾದ ಕಾರಹುಣ್ಣಿಮೆ ಸಂಪ್ರದಾಯಕ್ಕೂ ಕುತ್ತು ಬಂದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಕಾರಹುಣ್ಣಿಮೆ ಹಬ್ಬದ ಆಚರಣೆಯ ಸಂದರ್ಭದಲ್ಲಿ ನಡೆದ ರಾಕ್ಷಸೀ ಕೃತ್ಯ ಅತ್ಯಂತ ಖಂಡನೀಯ ಎಂದಿದ್ದಾರೆ.

Injured Treatment at Hospital
'ಐ ಲವ್ ಮೊಹಮ್ಮದ್' ಘೋಷಣೆ: ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಕೋಮು ಘರ್ಷಣೆ, ಕಲ್ಲು ತೂರಾಟ

ಸಂಪ್ರದಾಯದಂತೆ ಕಾರ ಹುಣ್ಣಿಮೆಯಂದು ನಮ್ಮ ರೈತರು ತಮ್ಮ ಎತ್ತುಗಳನ್ನು ತಂದು ಹೋರಿ ಓಡಿಸುವಾಗ ಪಟಾಕಿ ಸಿಡಿಸಿದರು ಎಂಬ ಒಂದೇ ಒಂದು ಕಾರಣಕ್ಕೆ ಮುಸ್ಲಿಂ ಮತಾಂಧ ಕಿಡಿಗೇಡಿಗಳು ಅನ್ನದಾತರ ಕೈಯನ್ನೇ ಕತ್ತರಿಸಿ ಹಾಕುವ ಕ್ರೌರ್ಯ ಮೆರೆದಿದ್ದಾರೆ. ಇಬ್ಬರ ಕೈಗಳನ್ನು ಕತ್ತರಿಸಲಾಗಿದ್ದು, ಒಟ್ಟು 8 ಜನ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಕೃಷಿ ಸಂಸ್ಕೃತಿಯನ್ನು ಆಚರಿಸುತ್ತಿದ್ದ ಅಮಾಯಕ ರೈತರ ಮೇಲೆಯೇ ಇಂತಹ ಭೀಕರ ಹಲ್ಲೆ ನಡೆಸಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ, ಮುಸ್ಲಿಂ ಮತಾಂಧ ಕಿಡಿಗೇಡಿಗಳಿಗೆ ಎಷ್ಟು ಕುಮ್ಮಕ್ಕು ಸಿಗುತ್ತಿದೆ ಎನ್ನುವುದಕ್ಕೆ ಜೀವಂತ ನಿದರ್ಶನ ಎಂದು ಆರೋಪಿಸಿದ್ದಾರೆ.

ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಕೇವಲ ಒಂದು ಸಮುದಾಯದ ಓಲೈಕೆಗೆ ನಿಂತಿರುವುದು ಸರಿಯೇ?. ಈ ಘೋರ ಕೃತ್ಯ ಎಸಗಿದ ಮತಾಂಧ ಕಿಡಿಗೇಡಿಗಳಿಗೆ ಕಾನೂನಿನ ಭಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಯಾರು? ದಿನಬೆಳಗಾದರೆ ಸಂವಿಧಾನದ ಬಗ್ಗೆ ಭಾಷಣ ಬಿಗಿಯುವ ನೀವು, ಮೊದಲು ಈ ಮತಾಂಧ ಮುಸ್ಲಿಂ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಸಂವಿಧಾನವನ್ನು ಪಾಲನೆ ಮಾಡಿ ಸ್ವಾಮಿ. ಈ ರಕ್ತಪಾತ ಮತ್ತು ಹಿಂಸಾಚಾರಕ್ಕೆ ನಿಮ್ಮ ಕಾಂಗ್ರೆಸ್ ಸರ್ಕಾರದ ಓಲೈಕೆ, ತುಷ್ಟೀಕರಣ ಹಾಗೂ ನಿಷ್ಕ್ರಿಯತೆಯೇ ನೇರ ಹೊಣೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ನರೇಗಲ್ ಗ್ರಾಮದ ಘಟನೆಯ ಹಿಂದಿರುವ ಪ್ರತಿಯೊಬ್ಬ ಅಪರಾಧಿಯನ್ನೂ ತಕ್ಷಣವೇ ಬಂಧಿಸಿ, ಕಠಿಣಾತಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗಾಯಗೊಂಡ ರೈತರ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಬೇಕು. ಮತಾಂಧ ಕಿಡಿಗೇಡಿಗಳ ಹೆಡೆಮುರಿ ಕಟ್ಟಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com