'ಗಾರ್ಡನ್ ಸಿಟಿ'ಯನ್ನು 'ಗಾರ್ಬೇಜ್ ಸಿಟಿ' ಮಾಡಿದ ಮಹಾನ್ ಶ್ರೇಯಸ್ಸು ಕಾಂಗ್ರೆಸ್ ಸರ್ಕಾರದ್ದು: ರೀಲ್ಸ್ ಮಂತ್ರಿಗಳೇ ಈ ಪತ್ರಿಕಾ ವರದಿಯನ್ನು ಒಮ್ಮೆ ನೋಡಿ!

ಬೆಂಗಳೂರಿನ ಮೂಲೆ ಮೂಲೆಯಲ್ಲೂ ಕಸದ ರಾಶಿ ಬಿದ್ದು ಇಡೀ ರಾಜಧಾನಿ ನಾರುತ್ತಿದ್ದರೂ, ನೀವೇನೋ ದೊಡ್ಡ ಸಾಧನೆ ಮಾಡಿರುವಂತೆ ಕೇವಲ ರೀಲ್ಸ್ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಭಾಷಣ ಬಿಗಿಯುತ್ತಾ ಕಾಲ ಕಳೆಯುತ್ತಿದ್ದೀರಿ.
R. Ashok
ಆರ್. ಅಶೋಕ್
Updated on

ಬೆಂಗಳೂರು: ರೀಲ್ಸ್ ಮಂತ್ರಿ ಕೃಷ್ಣ ಬೈರೇಗೌಡ ಅವರೇ, ಈ ಪತ್ರಿಕಾ ವರದಿಯನ್ನು ಒಮ್ಮೆ ನೋಡಿ ಸ್ವಾಮಿ! ನಮ್ಮ ಹೆಮ್ಮೆಯ 'ಗಾರ್ಡನ್ ಸಿಟಿ'ಯನ್ನು 'ಗಾರ್ಬೇಜ್ ಸಿಟಿ' ಮಾಡಿದ ಮಹಾನ್ ಶ್ರೇಯಸ್ಸು ನಿಮ್ಮ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಬೆಂಗಳೂರಿನ ಮೂಲೆ ಮೂಲೆಯಲ್ಲೂ ಕಸದ ರಾಶಿ ಬಿದ್ದು ಇಡೀ ರಾಜಧಾನಿ ನಾರುತ್ತಿದ್ದರೂ, ನೀವೇನೋ ದೊಡ್ಡ ಸಾಧನೆ ಮಾಡಿರುವಂತೆ ಕೇವಲ ರೀಲ್ಸ್ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಭಾಷಣ ಬಿಗಿಯುತ್ತಾ ಕಾಲ ಕಳೆಯುತ್ತಿದ್ದೀರಿ.

ಬೆಂಗಳೂರಿನ ಪ್ರಮುಖ ರಸ್ತೆಗಳು, ವಾರ್ಡ್‌ಗಳು ಹಾಗೂ ನಾಗರಿಕರ ವಸತಿ ಪ್ರದೇಶಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಕೆ.ಆರ್. ಪುರ, ನಾಗಸಂದ್ರ ಮೆಟ್ರೋ ನಿಲ್ದಾಣದ ರಸ್ತೆ, ಲಗ್ಗೆರೆ, ಚೊಕ್ಕಸಂದ್ರ, ಟೆಲಿಕಾಂ ಲೇಔಟ್ ಸೇರಿದಂತೆ ಇಡೀ ನಗರ ಇಂದು ಕಸದ ಸಾಮ್ರಾಜ್ಯವಾಗಿದೆ ಎಂದು ಟೀಕಿಸಿದ್ದಾರೆ.

ದಿನವೂ ಕಸ ವಿಲೇವಾರಿ ಆಗುತ್ತಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್ (BSWMAL) ಅಧಿಕಾರಿಗಳು ಕಾಗದದ ಮೇಲೆ ಸುಳ್ಳು ಲೆಕ್ಕ ಬರೆಯುತ್ತಿದ್ದಾರೆ. ಆದರೆ ಬೀದಿಯಲ್ಲಿ ಹಸುಗಳು ಆ ಕಸದ ರಾಶಿಯನ್ನು ಮೇಯುತ್ತಾ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ.

ಈಗ ಹೇಳಿ ರೀಲ್ಸ್ ಮಂತ್ರಿಗಳೇ, ಇತ್ತೀಚೆಗೆ ಬೆಂಗಳೂರನ್ನು 'Failed Model' (ಸೋತ ಮಾದರಿ) ಎಂದು ಕರೆದಿದ್ದರಲ್ಲ, ಅದಕ್ಕೆ ಯಾರು ಹೊಣೆ? ಮೂರು ವರ್ಷ ಬೆಂಗಳೂರಿನ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಿಕಟಪೂರ್ವ ಬೆಂಗಳೂರು ನಗರಾಭಿವೃದ್ಧಿ ಮಂತ್ರಿ ಹಾಗೂ ಹಾಲಿ ಸಿಎಂ ಡಿಕೆಶಿವಕುಮಾರ್ ಅವರೋ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಅವರೋ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಉಳಿದಿರುವ ಎರಡು ವರ್ಷವೂ ಹೀಗೆ 'Failed Model' ಎಂದು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ, ರೀಲ್ಸ್ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೀರೋ ಅಥವಾ ಪರಿಸ್ಥಿತಿ ಸುಧಾರಿಸಲು ಏನಾದರೂ ಕಠಿಣ ಕ್ರಮ ಕೈಗೊಳ್ಳುತ್ತೀರೋ?

ಬೆಂಗಳೂರಿನ ಜನತೆ ತೆರಿಗೆ ಕಟ್ಟುತ್ತಿರುವುದು ನಿಮ್ಮ ಬಿಟ್ಟಿ ಪ್ರಚಾರದ ರೀಲ್ಸ್ ನೋಡಲು ಅಲ್ಲ, ಕನಿಷ್ಠ ಮೂಲಸೌಕರ್ಯ ಮತ್ತು ಸ್ವಚ್ಛತೆಯನ್ನು ಪಡೆಯಲು. ನಿಮ್ಮ ಈ ನಿಷ್ಕ್ರಿಯ ಆಡಳಿತ ಹೀಗೆ ಮುಂದುವರೆದರೆ ಮುಂಬರುವ ಚುನಾವಣೆಯಲ್ಲಿ ಬೆಂಗಳೂರಿಗರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.

R. Ashok
ಬೆಂಗಳೂರು: ಕಸದ ತೊಟ್ಟಿಗಳಾದ ಶಂಪುರ, ಟ್ಯಾನರಿ ರಸ್ತೆ! ಎಲ್ಲೆಲ್ಲೂ ದುರ್ವಾಸನೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com