

ಬೆಂಗಳೂರು: ಬೆಂಗಳೂರಿನ ಅಶೋಕ್ ನಗರದ ಗರುಡ ಮಾಲ್ ಸಮೀಪದ ಅಪಾರ್ಟ್‌ಮೆಂಟ್‌ನ ಫ್ಲಾಟ್ ವೊಂದರಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ಕಟ್ಟಡವೇ ಹೊತ್ತಿ ಉರಿದಿದೆ.
ಇಂದು ಮಧ್ಯಾಹ್ನ ರಾಯಲ್ ಹೆರಿಟೇಜ್ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಅವಘಡ ಸಂಭವಿಸಿದ್ದು, ಸ್ಪೋಟದ ಸುದ್ದು ಎಂಜಿ ರಸ್ತೆ ಸುತ್ತಮುತ್ತಲ ಬಡಾವಣೆಗಳಿಗೂ ಕೇಳಿಸಿದೆ. ಸದ್ಯ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.
ಬೆಂಕಿ ಕಾಣಿಸಿಕೊಂಡ ಪ್ಲಾಟ್ ನಲ್ಲಿ ಮೂರು ಸಿಲಿಂಡರ್ ಇದ್ದು, ಈ ಪೈಕಿ ಒಂದು ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಮನೆಯೊಳಗೆ ಹೊಗೆ, ಬೆಂಕಿ ಕಾಣಿಸಿಕೊಂಡ ಕೂಡಲೇ ಕುಟುಂಬವು ಎಚ್ಚೆತ್ತು ತಕ್ಷಣ ಹೊರಬಂದಿದ್ದು, ಅಪಾಯದಿಂದ ಪಾರಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಕರಕಲಾಗಿವೆ.
ಅಶೋಕ್ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.