

ಬೆಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಮನೆಯಿಂದಲೇ ಇಂದು ಸಿಬ್ಬಂದಿ ಎಸ್ಐಆರ್ ಆರಂಭ ಮಾಡಿದರು. ಇದೇ ವೇಳೆ, ‘ಹೇಗೆ ಲಾಗಿನ್ ಮಾಡಬೇಕು ಹೇಳಿ, ಡೌನ್ ಲೋಡ್ ಮಾಡಿ’ ಎಂದು ಸಿಎಂ ಸೂಚಿಸಿದರು. ‘ನನ್ನ ಫೋನ್ನಲ್ಲೇ ಹೇಗೆ ಮಾಡುವುದು ತಿಳಿಸಿಕೊಡಿ’ ಎಂದು ಅವರು ಸೂಚಿಸಿದರು.
ಅಧಿಕಾರಿಗಳು ಅವರ ಫೋನ್ನಲ್ಲೇ ಆ್ಯಪ್ ಡೌನ್ಲೋಡ್ ಮಾಡಿ ತಿಳಿಸಿಕೊಟ್ಟರು. ಫೋನ್ನಲ್ಲಿ ಆ್ಯಪ್ ಯೂಸ್ ಮಾಡುವುದು ಸ್ವಲ್ಪ ಜನರಿಗೆ ಗೊತ್ತಾಗಬೇಕು, ಸ್ವಲ್ಪ ಕನ್ಫ್ಯೂಸ್ ಆಗುತ್ತದೆ ಎಂದು ಸಿಎಂ ಹೇಳಿದರು.ಸ್ವತಃ ತಾವೇ ಎಸ್ಐಆರ್ ಎನುಮರೇಷನ್ ಫಾರ್ಮ್ ಭರ್ತಿ ಮಾಡಿದರು.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಇಂದು ಆರಂಭವಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಗರಿಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು, ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
"ಮತದಾನದ ಹಕ್ಕು ಎಂದರೆ ಬದುಕುವ ಹಕ್ಕು. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಆಧರಿಸಿ ಅರ್ಹರಲ್ಲದ ಪಡಿತರ ಚೀಟಿದಾರರನ್ನು ಪರಿಶೀಲಿಸಿ ಪಟ್ಟಿಯಿಂದ ತೆಗೆದುಹಾಕುವಂತೆ ಆದೇಶಿಸಲಾಗಿದೆ. ಇದೇ ರೀತಿಯ ಕ್ರಮಗಳನ್ನು ಇತರ ರಾಜ್ಯಗಳೂ ಕೈಗೊಳ್ಳುತ್ತಿವೆ. ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ," ಎಂದು ಶಿವಕುಮಾರ್ ಹೇಳಿದರು.
ಭಾರತ ಚುನಾವಣಾ ಆಯೋಗವು ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಮತದಾರರ ಗಣತಿ ಕಾರ್ಯವನ್ನು ಮಂಗಳವಾರದಿಂದ ಆರಂಭಿಸಿದ್ದು, ಇದು ಜುಲೈ 29ರವರೆಗೆ ನಡೆಯಲಿದೆ.
ಎಸ್‌ಐಆರ್ ಪ್ರಕ್ರಿಯೆಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ನೀಡಲು ತೀರ್ಮಾನಿಸಿದೆ. ಈ ಕುರಿತು ಕಂದಾಯ ಇಲಾಖೆ ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನಾಗರಿಕರು ಈ ಪ್ರಮಾಣಪತ್ರವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಪಡೆಯಬಹುದು.
ಕಂದಾಯ ಇಲಾಖೆ ಪ್ರಕಾರ, ಶಾಶ್ವತ ನಿವಾಸ ಪ್ರಮಾಣಪತ್ರವು ಅಧಿಕೃತ ವಿಳಾಸದ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ನಾಗರಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಅಟಲ್ ಜನಸ್ನೇಹಿ ಕೇಂದ್ರಗಳು, ನಾಡಕಚೇರಿಗಳು, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಪ್ರಮಾಣಪತ್ರ ಪಡೆಯಬಹುದು.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕ್ಕುಮಾರ್ ಅವರು, ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜ್ಯದ 5.5 ಕೋಟಿಗೂ ಅಧಿಕ ಮತದಾರರನ್ನು ಒಳಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.