

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದು ಹಾಗೂ ಅನೇಕ ದೇಶಗಳು ವಾಯುಪ್ರದೇಶವನ್ನು ಮುಚ್ಚಿರುವ ಹಿನ್ನೆಲೆ, ರಾಜ್ಯದ ಜನತೆಗೆ ನೆರವು ನೀಡಲು ಕರ್ನಾಟಕ ಸರ್ಕಾರ ರಾಜ್ಯ ಹಾಗೂ ಜಿಲ್ಲಾಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು (EOCs) ಆರಂಭಿಸಿದೆ.
ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದು, ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿನ ಪ್ರಚಲಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹಲವಾರು ರಾಷ್ಟ್ರಗಳು NOTAM - ವೈಮಾನಿಕ ಸಂಚಾರ ಬಂದ್ ಘೋಷಿಸಿವೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳಲ್ಲಿ ಅಡಚಣೆಯಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಇತ್ತೀಚಿನ ಸಲಹೆಯಂತೆ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾದ ಭಾಗಶಃ ಪ್ರದೇಶಗಳು, ಬಹ್ರೇನ್, ಓಮನ್, ಇರಾಕ್, ಜೋರ್ಡಾನ್, ಕುವೈತ್, ಯುಎಇ ಮತ್ತು ಕತಾರ್ ಮೇಲಿನ ವಾಯುಪ್ರದೇಶವು ಮಾರ್ಚ್ 2 ರವರೆಗೆ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಮಾನ ಪ್ರಯಾಣದ ವ್ಯತ್ಯಯದಿಂದಾಗಿ ಕರ್ನಾಟಕ ಸೇರಿದಂತೆ ವಿವಿಧ ದೇಶಗಳ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ, ವಿಶೇಷವಾಗಿ ಯುಎಇನಲ್ಲಿ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರ ನಿರ್ದೇಶನದಂತೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು (DEOCs) ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಳಿಸಲಾಗಿದೆ. ಇವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ನೆರವು ನೀಡಲು 24x7 ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳು ನೀಡುವ ಮಾರ್ಗಸೂಚಿಗಳನ್ನು SEOC ಮತ್ತು DEOC ಗಳು ನಿರಂತರವಾಗಿ ನವೀಕರಿಸುತ್ತಿವೆ. ದೆಹಲಿಯಲ್ಲಿರುವ ಕರ್ನಾಟಕ ಭವನದ ತಂಡವನ್ನು ಸಮನ್ವಯಕ್ಕಾಗಿ ಕರ್ನಾಟಕದ ರೆಸಿಡೆಂಟ್ ಕಮಿಷನರ್ ಅವರು ಸಕ್ರಿಯಗೊಳಿಸಿದ್ದಾರೆ. ರಾಯಭಾರ ಕಚೇರಿ ಮತ್ತು ದೂತಾವಾಸವಾರು ಸಹಾಯವಾಣಿ ಸಂಖ್ಯೆಗಳು ಹಾಗೂ ಮಾರ್ಗಸೂಚಿಗಳನ್ನು ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗಿದೆ. ಸಾರ್ವಜನಿಕರ ಅರಿವಿಗಾಗಿ ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ನವದೆಹಲಿಯ ಕರ್ನಾಟಕ ರೆಸಿಡೆಂಟ್ ಕಮಿಷನರ್ ಕಚೇರಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದ Rapid Response Cell ನಿಕಟ ಸಮನ್ವಯದಲ್ಲಿದೆ. ರಾಜ್ಯ ಮತ್ತು ಜಿಲ್ಲಾ ತುರ್ತು ಕೇಂದ್ರಗಳಿಗೆ ಬರುವ ಸಹಾಯದ ಕೋರಿಕೆಗಳನ್ನು ಕ್ರೋಢೀಕರಿಸಿ, ಕರ್ನಾಟಕ ರೆಸಿಡೆಂಟ್ ಕಮಿಷನರ್ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗುತ್ತಿದೆ.
ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆಸಿರುವ ಕರ್ನಾಟಕದ ಜನರು ಸ್ಥಳೀಯ ಸರ್ಕಾರಗಳು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿಗಳನ್ನು ಸಹಾಯವಾಣಿ ಮೂಲಕ ಸಂಪರ್ಕಿಸಲು ಮತ್ತು 'ಸಾರಥಿ ಸಹಾಯತಾ' (Sarthi Sahayata) ಪೋರ್ಟಲ್ ಹಾಗೂ ಇತರ ಅಧಿಕೃತ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಅಪ್‌ಡೇಟ್‌ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement