
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ ವಾರ್ಡ್ ವಾರು ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಒಟ್ಟು 88,92,528 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಸೋಮವಾರ ತಿಳಿಸಿದ್ದಾರೆ. ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾ. 10 ರಿಂದ ಮಾ. 16 ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ನಗರದ ಐದು ನಗರ ಪಾಲಿಕೆಗಳನ್ನು ಒಳಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 369 ವಾರ್ಡ್‌ಗಳಿಗೆ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ.
RSS ನ್ನು ನಿಷೇಧಿಸುತ್ತೇವೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಭ್ರಮೆ ಎಂಬ ಮಾಜಿ ಸಂಸದ ಅನಂತ ಕುಮಾರ್ ಹೆಗಡೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಜಾರಕಿಹೊಳಿ, ಆರ್ ಎಸ್ ಎಸ್ ನ್ನು ಇದುವರೆಗೆ ಯಾರೂ ನಿಷೇಧ ಮಾಡಿಲ್ಲ, ನಿಷೇಧ ಮಾಡುವುದಾಗಿ ಯಾರೂ ಹೇಳಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿದ್ದು, ಸಂಘಟನೆ ನಿಷೇಧಕ್ಕೂ ಅದರ ಚಟುವಟಿಕೆ ನಿರ್ಬಂಧಕ್ಕೂ ವ್ಯತ್ಯಾಸವಿದೆಯಲ್ಲವೇ ಎಂದು ಮರು ಪ್ರಶ್ನಿಸಿದರು. ನಮ್ಮ ಸರ್ಕಾರವಾಗಲೀ ಅಥವಾ ಯಾವುದೇ ಸರ್ಕಾರವಾಗಲೀ ಆರ್ಎಸ್ಎಸ್ ನ್ನು ನಿಷೇಧಿಸುವ ಬಗ್ಗೆ ಎಲ್ಲೂ ಹೇಳಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್, ಚಾಕುವಿನಿಂದ ದಾಳಿ ಮಾಡಿದ್ದು, ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, 7 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ನಗರದ "ಗುರುಕುಲ ವಸತಿ ಶಾಲೆ"ಯಲ್ಲಿ ವರದಿಯಾಗಿದೆ. ಆಂಧ್ರ ಪ್ರದೇಶದ ಅದವಾನಿಯ ಹೇಮಂತ್ ಮೃತ ಬಾಲಕನಾಗಿದ್ದಾನೆ. ರಾತ್ರಿ ಊಟದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಮಲಗಿದ್ದರು. ಈ ವೇಳೆ ಆರೋಪಿತ ವಿದ್ಯಾರ್ಥಿ ರಾಡ್, ಸ್ಕ್ರೂ ಡ್ರೈವರ್ ಹಾಗೂ ರೇಡಿಯಮ್ ಕಟರ್, ಚಾಕುವಿನಿಂದ ಸಹಪಾಠಿಗಳ ಮೇಲೆ ದಾಳಿ ನಡೆಸಿದ್ದಾನೆ ಬಳ್ಳಾರಿ ಬಿಮ್ಸ್ ಮತ್ತು ಟ್ರಾಮಕೇರ್ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಗಾಯಗೊಂಡಿರುವ ಕೆಲವರ ಸ್ಥಿತಿ ಗಂಭೀರವಾಗಿದೆ ಹಲ್ಲೆಯ ಬಳಿಕ ವಿದ್ಯಾರ್ಥಿ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ ಸಮಸ್ಯೆ ಕುರಿತು ಕೆಲವು ಸಮಯದ ಹಿಂದೆ ಮಕ್ಕಳು ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.ಈ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಬಜೆಟ್ ನಲ್ಲಿ ಆ ಸಮಸ್ಯೆ ಪರಿಹಾರಕ್ಕಾಗಿ 490 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದು, ಬಜೆಟ್ ನಲ್ಲಿ "ಉಡುತೊರೆಹಳ್ಳ ನೀರಾವರಿ ಯೋಜನೆ"ಯನ್ನು ಘೋಷಿಸಿ, ರೂ.490 ಕೋಟಿ ಅನುದಾನವನ್ನು ಸಹ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಹೈಕಮಾಂಡ್ ಅವಕಾಶ ಕೊಟ್ಟರೆ ಮುಂದಿನ ಎರಡು ವರ್ಷವೂ ನಾನೇ ಆಯವ್ಯಯ ಮಂಡಿಸುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ದೆಹಲಿಗೆ ತೆರಳಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ದಿಲ್ಲಿಗೆ ತೆರಳುತ್ತಿರುವುದಾಗಿ ಡಿಸಿಎಂ ಕಚೇರಿ ಮಾಹಿತಿ ನೀಡಿದೆ. ವಿಧಾನ ಮಂಡಲ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆ ಸಂಬಂಧ ಚರ್ಚೆಗಳು ಬಿರುಸುಗೊಂಡಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ರಾಜಕೀಯ ಚರ್ಚೆಗಳನ್ನು ಹುಟ್ಟು ಹಾಕಿದೆ.
Advertisement