

ಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸದೆ ಇರುವುದು ತಾರತಮ್ಯ ಧೋರಣೆಯಾಗಿದೆ. ಇದು ಸರ್ವಥಾ ಸರಿಯಲ್ಲ. ಅವರಿಗೆ ಬೆಣ್ಣೆ, ನಮಗೆ ಸುಣ್ಣ ಎಂದರೆ ಹೇಗೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಬುಧವಾರ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕೇಂದ್ರ ಸರಕಾರವು ಹತ್ತಿರದಲ್ಲೇ ಇರುವ ತಮಿಳುನಾಡು ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಹೀಗೆ ಮಾಡಿರಬಹುದು. ಆದರೆ ನಮ್ಮ ರಾಜ್ಯದ ಬೇಡಿಕೆ ಬಗ್ಗೆ ಅದು ಉದಾಸೀನ ಮನೋಭಾವ ಪ್ರದರ್ಶಿಸಿರುವುದು ಸರಿಯಲ್ಲ ಎಂದಿದ್ದಾರೆ.
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುತ್ತದೆ ಎಂದು ಕಳೆದ ವರ್ಷ(2025ರ ಜೂನ್ 24ರಂದು) ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆಯಲಾಗಿತ್ತು. ಆದರೆ ಇದಕ್ಕೆ ಕೇಂದ್ರ ಇದುವರೆಗೂ ಸ್ಪಂದಿಲ್ಲ. ಧಾರವಾಡ ಸಂಸದರಾಗಿ ಕೇಂದ್ರ ಸಂಪುಟದಲ್ಲಿರುವ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಈಗ ನಿರ್ದಿಷ್ಟವಾಗಿ ಧ್ವನಿ ಎತ್ತಿ, ರಾಜ್ಯದ ಹಿತಾಸಕ್ತಿಯ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಎರಡರ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ಇನ್ನೂ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಮನಗಾಣಬೇಕು ಎಂದು ಎಂ.ಬಿ. ಪಾಟೀಲ ಆಗ್ರಹಿಸಿದ್ದಾರೆ.
Advertisement