

ಬೆಂಗಳೂರು: ರಾಜ್ಯದಲ್ಲಿ ಉಂಟಾದ ತೀವ್ರ ಎಲ್‌ಪಿಜಿ ಕೊರತೆ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆದಾರರು ತಮ್ಮ ಸಾಮಾನ್ಯ ಬಳಕೆಯ ಕೇವಲ ಶೇ.20ರಷ್ಟು ಗ್ಯಾಸ್‌ನಲ್ಲೇ ಕಾರ್ಯಾಚರಣೆ ನಡೆಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸೋಮವಾರ ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು, ಈಗ ಪ್ರತಿದಿನ ಸುಮಾರು 16,000 ವಾಣಿಜ್ಯ ಸಿಲಿಂಡರ್‌ಗಳನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಹಿಂದೆ ದಿನಕ್ಕೆ ಸುಮಾರು 45,000 ಸಿಲಿಂಡರ್ ಬಳಕೆಯಾಗುತ್ತಿತ್ತು. ಆದ್ದರಿಂದ ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಹೊಸ ವ್ಯವಸ್ಥೆಯಡಿಯಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕ್ಯಾಂಟೀನ್‌ಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ 4,200 ಸಿಲಿಂಡರ್, ಸರ್ಕಾರಿ ವ್ಯವಸ್ಥೆಗೆ 1,200 ಸಿಲಿಂಡರ್ ನೀಡಲಾಗುತ್ತಿದೆ. ಹೋಟೆಲ್‌ಗಳಿಗೆ ಸುಮಾರು 10,000 ಸಿಲಿಂಡರ್ ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ಹೋಟೆಲ್‌ಗೆ ಪೂರೈಕೆ ಮಾಡಲಾಗುತ್ತದೆ.
ಇದು ಅವರ ಸಾಮಾನ್ಯ ಬಳಕೆಯ ಕೇವಲ ಶೇ.20ರಷ್ಟು ಮಾತ್ರವೇ ಆಗಿದೆ. ಹಿಂದೆ ವಾರಕ್ಕೆ ಐದು ಸಿಲಿಂಡರ್ ಬಳಸುತ್ತಿದ್ದ ಹೋಟೆಲ್‌ಗಳು ಈಗ ಒಂದು ಸಿಲಿಂಡರ್‌ನಲ್ಲೇ ಕೆಲಸ ನಡೆಸಿಕೊಳ್ಳಬೇಕು. ಇದು ತಾತ್ಕಾಲಿಕ ಕ್ರಮವಾದರೂ ಅನಿವಾರ್ಯ ಎಂದು ಸಚಿವರು ತಿಳಿಸಿದರು.
ಈ ನಡುವೆ ಕೃಷಿ ಚಟುವಟಿಕೆಗಳು, ಬೀಜ ಸಂಸ್ಕರಣೆ ಮತ್ತು ಔಷಧ ತಯಾರಿಕೆಗಾಗಿ ದಿನಕ್ಕೆ 500 ಸಿಲಿಂಡರ್ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಜೊತೆಗೆ ತುರ್ತು ಪರಿಸ್ಥಿತಿಗಳಿಗೆ 205 ಸಿಲಿಂಡರ್‌ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಹೆಚ್ಚುವರಿ ಶೇ.20ರಷ್ಟು ಸಿಲಿಂಡರ್‌ಗಳನ್ನು ಪೂರೈಸಲು ಒಪ್ಪಿಗೆ ನೀಡಿದೆ. ಬ್ಲಾಕ್ನಲ್ಲಿ ಮಾರಾಟ ಮಾಡುವುದನ್ನು ಹಾಗೂ ಅಧಿಕೃತವಲ್ಲದ ಮಾರುಕಟ್ಟೆಗೆ ಸಿಲಿಂಡರ್‌ಗಳು ಹೋಗುವುದನ್ನು ತಡೆಯಲು ಕೇಂದ್ರವು ನಿರ್ಣಯ ಕೈಗೊಂಡಿದೆ. ಅದರಂತೆ, ಎಲ್ಲಾ ವಾಣಿಜ್ಯ ಬಳಕೆದಾರರು, ಮುಖ್ಯವಾಗಿ ಹೋಟೆಲ್‌ಗಳು, ಒಂದು ವಾರದೊಳಗೆ ಗೇಲ್ (GAIL-Gas Authority of India Limited) ಕಂಪನಿಯೊಂದಿಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಇಲ್ಲದಿದ್ದರೆ ಸಿಲಿಂಡರ್ ವಿತರಣೆ ಕಷ್ಟವಾಗಲಿದೆ. ಈ ಕ್ರಮದಿಂದ ಕಪ್ಪು ಮಾರುಕಟ್ಟೆಯನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಗೃಹ ಬಳಕೆದಾರರಿಗೂ ಹೊಸ ನಿಯಮ ಜಾರಿಯಾಗಿ ತರಲಾಗಿದೆ. ನಗರ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 40 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ. ಇದರಿಂದ ಎಲ್ಲರಿಗೂ ಸಮಾನವಾಗಿ ಪೂರೈಕೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಚಿವರು ಪರ್ಯಾಯ ಇಂಧನ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದ್ದು. ಮರದ ಇಂಧನ, ವಿದ್ಯುತ್ ಆಧಾರಿತ ಇಂಡಕ್ಷನ್ ಸ್ಟೌವ್‌ಗಳು, ಬಯೋಗ್ಯಾಸ್ ಮತ್ತು ಸೌರಶಕ್ತಿ ಬಳಸುವಂತೆ ಸಲಹೆ ನೀಡಿದ್ದಾರೆ.
ನಾವು ಸುಮಾರು ಶೇ.70 ತೈಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ಇಂತಹ ಸಂಕಷ್ಟಗಳು ನಮ್ಮ ಸ್ವಾವಲಂಬನೆ ಅಗತ್ಯವನ್ನು ತೋರಿಸುತ್ತವೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಇವಾನ್ ಡಿ'ಸೋಜಾ ಅವರು, ಸರ್ಕಾರವು ಅನಿಲ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಕಾರ್ಯಾಚರಣೆ ಕಡಿಮೆ ಮಾಡಿದ್ದು, ಗ್ರಾಹಕರ ನಷ್ಟದ ಭೀತಿ ಎದುರಿಸುತ್ತಿವೆೃ ಎಂದು ಹೇಳಿದರು.
ಸರ್ಕಾರಕ್ಕೆ ಗ್ಯಾಸ್ ಒದಗಿಸಲು ಸಾಧ್ಯವಾಗದಿದ್ದರೆ ಕನಿಷ್ಟ ಸೌದೆಗಳನ್ನಾದರೂ ಒದಗಿಸಿದ. ಮಾರುಕಟ್ಟೆಯಲ್ಲಿ ಸೌದೆಗಳು ಕೂಡ ಸುಲಭವಾಗಿ ಲಭ್ಯವಿಲ್ಲ ಎಂದು ಗಮನ ಸೆಳೆದರು.
ಸದಸ್ಯರು ಎತ್ತಿದ ಕಳವಳಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಪರ್ಯಾಯ ಇಂಧನ ಮೂಲಗಳು ಮತ್ತು ಸ್ವಾವಲಂಬನೆಯ ಅಗತ್ಯವನ್ನು ಒತ್ತಿ ಹೇಳಿದರು.
"ಇಂದು, ನಾವು ನಮ್ಮ ತೈಲದ ಶೇಕಡಾ 70 ರಷ್ಟು ವಿದೇಶಗಳನ್ನು ಅವಲಂಬಿಸಿದ್ದೇವೆ. ಹೀಗಾಗಿ ನಾವು ಸೌರಶಕ್ತಿ, ಹಸಿರು ಶಕ್ತಿ ಮತ್ತು ಜೈವಿಕ ಅನಿಲವನ್ನು ಹೆಚ್ಚಿಸಬೇಕು ಎಂದು ಹೇಳಿದರು. ಇದೇ ವೇಳೆ ಪರ್ಯಾಯ ಇಂಧನಗಳು ಲಭ್ಯವಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಆಹಾರವಿಲ್ಲದೆ ಬದುಕುವ ಅಗತ್ಯವಿಲ್ಲ, ಪರ್ಯಾಯ ಮಾರ್ಗಗಳಿವೆ. ಉರುವಲು ಮತ್ತು ವಿದ್ಯುತ್ ಲಭ್ಯವಿದೆ ಮತ್ತು ಅವುಗಳನ್ನು ಸಮಾನಾಂತರವಾಗಿ ಬಳಸಬೇಕು ಎಂದು ತಿಳಿಸಿದರು.
ಸದಸ್ಯರು ಅರ್ಥಮಾಡಿಕೊಳ್ಳಬೇಕು. ಹೊಂದಾಣಿಕೆಗಳು ಅಗತ್ಯವಿದ್ದು, ಭವಿಷ್ಯದಲ್ಲಿ, ನಾವು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ಇತರರನ್ನು ಅವಲಂಬಿಸಬಾರದು ಎಂದು ಹೇಳಿದರು.
ಸರ್ಕಾರವು ಮುಂಬರುವ ವಾರದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತದೆ ಎಂದು ತಿಳಿಸಿದರು.
Advertisement