News wrap 24-03-2026 | Adani ಗಣಿಗಾರಿಕೆ ಬಾಕಿ ಪಾವತಿಸದ ಆರೋಪ: ಸರ್ಕಾರದ ವಿರುದ್ಧ 'ಕೈ' ಶಾಸಕರು ಕೆಂಡ; ಇಂಧನ ಕೊರತೆ ಭೀತಿ; ಬೆಳಗಾವಿಯಲ್ಲಿ ಬಂಕ್ ಮುಂದೆ ನೂರಾರು ಜನ ಸಾಲು!

News wrap 24-03-2026 | Adani ಗಣಿಗಾರಿಕೆ ಬಾಕಿ ಪಾವತಿಸದ ಆರೋಪ: ಸರ್ಕಾರದ ವಿರುದ್ಧ 'ಕೈ' ಶಾಸಕರು ಕೆಂಡ; ಇಂಧನ ಕೊರತೆ ಭೀತಿ; ಬೆಳಗಾವಿಯಲ್ಲಿ ಬಂಕ್ ಮುಂದೆ ನೂರಾರು ಜನ ಸಾಲು!

1. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಅವಕಾಶ ಕಲ್ಪಿಸುವ ಮಸೂದೆ ಅಂಗೀಕಾರ

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಗೆ ಅವಕಾಶ ಕಲ್ಪಿಸುವ 2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿರುವುದಾಗಿ ಸರ್ಕಾರ ಹೇಳಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸಬೇಕಿದೆ ಎಂದು ವಿಧೇಯಕದ ಪರ್ಯಾಲೋಚನ ಪ್ರಸ್ತಾವವನ್ನು ಮಂಡಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಇದೊಂದು ತುಘಲಕ್ ದರ್ಬಾರ್ ಆಗಿದೆ. ಇವಿಎಂನ್ನು ಪರಿಚಿಸಿದ್ದ ಕಾಂಗ್ರೆಸ್ ನವರೇ ಇದೀಗ ಅದನ್ನು ಹಿಂಪಡೆಯುತ್ತಿದ್ದಾರೆ. ವಿದ್ಯುನ್ಮಾನ ಮತಯಂತ್ರ ಸರಿಯಿಲ್ಲ ಎಂಬ ಇವರ ವಾದ ಹಾಸ್ಯಾಸ್ಪದ ಎಂದು ಹೇಳಿದರು. ಬಿಜೆಪಿ ಸದಸ್ಯ ವಿ. ಸುನೀಲ್ ಕುಮಾರ್ ಮಾತನಾಡಿ, ಈ ವಿಧೇಯಕದಲ್ಲಿ ಜನಸಾಮಾನ್ಯರಿಗೆ ಯಾವುದೇ ಲಾಭ ಇಲ್ಲ. ಇದರಿಂದ ಕಾಂಗ್ರೆಸ್ ಮಾತ್ರ ಲಾಭ. ಇದರ ಹಿಂದೆ ದೊಡ್ಡ ಹುನ್ನಾರ ಇದ್ದಂತಿದೆ ಎಂದು ಹೇಳಿದರು.

2. West Asia War: ಇಂಧನ ಕೊರತೆ ಭೀತಿ; ಬೆಳಗಾವಿಯಲ್ಲಿ ಬಂಕ್ ಮುಂದೆ ಸಾಲುಗಟ್ಟಿ ನಿಂತ ನೂರಾರು ಜನ; ಆತಂಕಗೊಳ್ಳದಂತೆ ಜಿಲ್ಲಾಧಿಕಾರಿ ಮನವಿ

ಮಧ್ಯಪ್ರಾಚ್ಯ ಯುದ್ಧಗ್ರಸ್ತವಾಗಿರುವ ಪರಿಣಾಮ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗತೊಡಗಿದ್ದು, ಪೆಟ್ರೋಲ್, ಡಿಸೇಲ್ ಕೊರತೆ ಆಗಲಿದೆ ಎಂಬ ಸುದ್ದಿ ಹರಡಿದ್ದರಿಂದ ಬೆಳಗಾವಿ ಜನರು ವಾಹನಗಳ ಸಮೇತ ಬಂಕುಗಳತ್ತ ಧಾವಿಸಿದ್ದರು. ಪ್ರತಿಯೊಂದು ಬಂಕ್ ಮುಂದೆ ಕೂಡ ನೂರಕ್ಕೂ ಹೆಚ್ಚು ಜನ ಕಾದು ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಅಭಾವ ಸೃಷ್ಟಿಯಾಗುವ ಭಯದಲ್ಲಿ ಜನ ಹೆಚ್ಚು ಪೆಟ್ರೋಲ್ ಹಾಕಿಸಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಬಂಕ್ ಸಿಬ್ಬಂದಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಗೃಹಬಳಕೆ ಸಿಲಿಂಡರ್ ಹಾಗೂ ಇಂಧನದ ಯಾವುದೇ ಕೊರತೆಯಿಲ್ಲ.‌ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು ಎಂದು ಜನತೆಗೆ ಕರೆ ನೀಡಿದ್ದಾರೆ.

3. Adani ಗಣಿಗಾರಿಕೆ ಬಾಕಿ ಪಾವತಿಸದ ಆರೋಪ: ಸರ್ಕಾರದ ವಿರುದ್ಧ ಕಾಂಗ್ರೆಸ್ ಪರಿಷತ್ ಸದಸ್ಯರಿಂದ ಸರ್ಕಾರಕ್ಕೆ ತರಾಟೆ

ಗಣಿಗಾರಿಕೆ ಬಾಕಿ ಪಾವತಿಸದ ಆರೋಪ ಮತ್ತು ಅದಾನಿ ಗ್ರೂಪ್‌ನ ಎಸಿಸಿ ಲಿಮಿಟೆಡ್‌ನಿಂದ "ಅನಧಿಕೃತ" ಕ್ವಾರಿ ಕಾರ್ಯಾಚರಣೆಗಳ ಮುಂದುವರಿಕೆಗೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ವಾಗ್ವಾದ ನಡೆಯಿತು. ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಬಿಜೆಪಿ ಸದಸ್ಯರು ಸರ್ಕಾರ ರಾಯಲ್ಟಿ ವಸೂಲಿ ಮತ್ತು ಅನುಮತಿಗಳನ್ನು ನಿರ್ವಹಿಸುತ್ತಿರುವ ರೀತಿಯನ್ನು ಪ್ರಶ್ನಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಎಂಎಲ್‌ಸಿ ಕೆ. ಶಿವಕುಮಾರ್, ತಮ್ಮ ಪಕ್ಷದ ಎಂಎಲ್‌ಸಿ ಆರತಿ ಕೃಷ್ಣ ಪರವಾಗಿ ಮಾತನಾಡುತ್ತಾ, ಕಾರ್ಯಾಚರಣೆಗಳು ಮುಂದುವರಿದಿದ್ದರೂ ಗಣನೀಯ ರಾಯಲ್ಟಿ ಬಾಕಿಗಳು ಪಾವತಿಸಲಾಗಿಲ್ಲ ಎಂದು ಆರೋಪಿಸಿದರು. ಕಲಬುರಗಿಯ ವಾಡಿಯಲ್ಲಿರುವ ಕಣ್ಣೂರು ಲೈಮ್‌ಸ್ಟೋನ್ ಬ್ಲಾಕ್‌ನಲ್ಲಿ ಗಣಿಗಾರಿಕೆಗಾಗಿ ಅದಾನಿ ಗ್ರೂಪ್‌ನ ಎಸಿಸಿ ಲಿಮಿಟೆಡ್‌ಗೆ ನೀಡಲಾದ ಗುತ್ತಿಗೆ ಅವಧಿ ಮುಗಿದಿದೆ ಎಂದು ಕರ್ನಾಟಕ ಸರ್ಕಾರಕ್ಕೆ ತಿಳಿದಿದೆಯೇ ಎಂದು ಸದಸ್ಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಆರೋಪಗಳಿಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪರವಾಗಿ ಉತ್ತರಿಸುತ್ತಾ, ಸಚಿವ ಎನ್. ಚೆಲುವರಾಯಸ್ವಾಮಿ, ಹೊಸ ಪರವಾನಗಿ ನೀಡಲಾಗಿಲ್ಲ. ಅಸ್ತಿತ್ವದಲ್ಲಿರುವ ಗಣಿಗಾರಿಕೆ ಗುತ್ತಿಗೆ ಮತ್ತು ಪ್ರತ್ಯೇಕ ಹೊಸ ಅರ್ಜಿಗಳನ್ನು ಇತ್ಯರ್ಥಗೊಳಿಸುವ ವಿಷಯಗಳು ಇನ್ನೂ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದಾರೆ.

4. ಉದ್ಯೋಗಾಕಾಂಕ್ಷಿಗಳಿಗೆ ಸುಮಾರು 25 ಕೋಟಿ ರೂ. ವಂಚನೆ: ದಂಪತಿ ಬಂಧನ

100 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಸುಮಾರು 25 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ದಂಪತಿಯನ್ನು ಬಂಧಿಸಿದ್ದಾರೆ. ಜೇಸನ್ ಡಿಸೋಜಾ, ಲವಿನಾ ಬಂಧಿತ ಆರೋಪಿಗಳಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಉದ್ಯೋಗ ನೀಡುವುದಾಗಿ ಸಂತ್ರಸ್ತರಿಂದ ಹಣ ಸಂಗ್ರಹಿಸಿದರು. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಉದ್ಯೋಗ ಕೊಡಿಸುವುದಾಗಿಯೂ ಅವರು ಸಂತ್ರಸ್ತರಿಗೆ ಭರವಸೆ ನೀಡಿದರು. ದಂಪತಿಗಳು ಏಜೆಂಟ್‌ಗಳ ಜಾಲವನ್ನು ಹೊಂದಿದ್ದು, ಕೆಲವು ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳ ಸಹಿಯೊಂದಿಗೆ ನಕಲಿ ನೇಮಕಾತಿ ಪತ್ರಗಳನ್ನು ತೋರಿಸಿ ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.

5. KarnatakaBypolls: ಒಂದು ದಿನ ಮುಂಚಿತವಾಗಿ ವಿಧಾನಸಭೆಯ ಬಜೆಟ್ ಅಧಿವೇಶನ ಅಂತ್ಯ

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಮಾರ್ಚ್ 26 ರಂದು ಮುಕ್ತಾಯಗೊಳಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸುವುದರೊಂದಿಗೆ ಮಾರ್ಚ್ 6 ರಂದು ಆರಂಭವಾದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವು ಮಾರ್ಚ್ 27 ರಂದು ಮುಕ್ತಾಯಗೊಳ್ಳಬೇಕಿತ್ತು. ವಿಧಾನಸಭೆಯ ಕಲಾಪ ಸಲಹಾ ಸಮಿತಿ ಸಭೆಯ ನಂತರ ಸ್ಪೀಕರ್ ಯು ಟಿ ಖಾದರ್ ಅವರು ಮಂಗಳವಾರ ಸದನದಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com