News wrap 25-03-2026 | ಹೈಕಮಾಂಡ್ ಒಪ್ಪಿದರೆ ಇನ್ನೆರಡೂ ಬಜೆಟ್ ನನ್ನದೇ- ಸಿಎಂ; ಆನ್ ಲೈನ್ ಗೇಮಿಂಗ್ ಚಟಕ್ಕೆ MBBS ವಿದ್ಯಾರ್ಥಿ ಬಲಿ; ಮಹಿಳಾ ರೌಡಿ ಶೀಟರ್ ಗೆ ಪೊಲೀಸ್ ಲೈಂಗಿಕ ಕಿರುಕುಳ

ಸುದ್ದಿ ಮುಖ್ಯಾಂಶಗಳು
ಸುದ್ದಿ ಮುಖ್ಯಾಂಶಗಳುonline desk

1. ಹೈಕಮಾಂಡ್ ಒಪ್ಪಿದರೆ ಮುಂದಿನ 2 ಬಜೆಟ್ ಮಂಡನೆ ನನ್ನದೇ- ಸಿದ್ದರಾಮಯ್ಯ

ಕರ್ನಾಟಕ ಬಜೆಟ್ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳೂ ಆರಂಭವಾಗಿವೆ. ಸಿಎಂ ಬದಲಾವಣೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ. ಅವರು ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲದೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಯಾರೊ ಏನೋ ಹೇಳುತ್ತಾರೆ ಎಂಬುದು ನನಗೆ ಮುಖ್ಯ ಅಲ್ಲ. ನನಗೆ ಹೈಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಹೈಕಮಾಂಡ್ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದಿದ್ದಾರೆ. ಬಜೆಟ್‌ಗೆ ಸಾಲ ಮಾಡಿದ್ದನ್ನು ಸಮರ್ಥಿಸಿಕೊಂಡ ಸಿಎಂ, ಅಭಿವೃದ್ಧಿಗಾಗಿ ಸಾಲ ಮಾಡಬೇಕಾಗುತ್ತದೆ. ಹೀಗಾಗಿ ಸಾಲ ಮಾಡಿದ್ದೇನೆ. ರಾಜ್ಯದ ಮಿತಿಯ ಒಳಗಡೆ ಸಾಲ ಮಾಡಿದ್ದೇನೆ. ಸಾಲದಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ ಎಂದು ವಿಪಕ್ಷಗಳ ಟೀಕೆಗೆ ಉತ್ತರಿಸಿದ್ದಾರೆ.

2. Online Gaming ಚಟಕ್ಕೆ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ!

ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಬೀದರ್‌ನಲ್ಲಿ ನಡೆದಿದೆ. ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂತಿಮ ವರ್ಷದ ವಿದ್ಯಾರ್ಥಿ ಅನಿಷ್ಕಾರ್ ಚವಾಣ್ ಮೃತನಾಗಿದ್ದು ಗೇಮ್‌ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದು ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ವಸತಿ ನಿಲಯದ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನೇಹಿತನಿಂದ 70,000 ರೂ.ಗಳನ್ನು ಸಾಲವಾಗಿ ಪಡೆದಿದ್ದಾನೆ. ಗೇಮಿಂಗ್ ಚಟದಲ್ಲಿ 80,000 ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಹಲವಾರು ಸಂದೇಶಗಳು ಆತನ ಫೋನ್ ನಲ್ಲಿ ಕಂಡು ಬಂದಿದೆ

3. ಕಸ ಸಂಗ್ರಹಣೆಯಲ್ಲಿ ಅಸ್ತವ್ಯಸ್ತ; ಗುತ್ತಿಗೆದಾರರ ವಿರುದ್ಧ 35 ಎಫ್‌ಐಆರ್ ದಾಖಲು

ಬೆಂಗಳೂರಿನಲ್ಲಿ ಕಸ ಗುತ್ತಿಗೆದಾರರು ಕಡಿಮೆ ಮೌಲ್ಯದ ಪ್ಲಾಸ್ಟಿಕ್ ನ್ನು ವರ್ಗಾವಣೆ ಕೇಂದ್ರಕ್ಕೆ ಕಳುಹಿಸದೆ, ಮಾರ್ಷಲ್‌ಗಳ ಕ್ರಮದ ನಂತರ ತ್ಯಾಜ್ಯವನ್ನು ಬೇರ್ಪಡಿಸಿ ಸೇವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜಿಬಿಎ ಯಾವುದೇ ಬ್ಲ್ಯಾಕ್‌ಮೇಲಿಂಗ್‌ಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್(ಬಿಎಸ್‌ಡಬ್ಲ್ಯೂಎಂಎಲ್) ಸಿಇಒ ಕರೀಗೌಡ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಬಿಎ ಕಸ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌ಎನ್ ಬಾಲಸುಬ್ರಹ್ಮಣ್ಯಂ ಅವರು, ಬಿಎಸ್‌ಡಬ್ಲ್ಯೂಎಂಎಲ್ ಸಿಇಒ, ಸಿಒಒ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು(ಎಇಇ) ಮತ್ತು ಸಹಾಯಕ ಎಂಜಿನಿಯರ್‌ಗಳು(ಎಇ) ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಸ್ಕ್ಯಾವೆಂಜರ್ಸ್ ಕಾಯ್ದೆ ಉಲ್ಲಂಘನೆಗಾಗಿ ಪ್ರತಿ ದೂರು ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

4. ಮಹಿಳಾ ರೌಡಿ ಶೀಟರ್ ಗೆ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲೈಂಗಿಕ ಕಿರುಕುಳ!

ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ವಿರುದ್ಧ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೇಡಿ ರೌಡಿಶೀಟರ್ಗೆ ಕಿರುಕುಳದ ಆರೋಪ ಮಾಡಿದ್ದಾರೆ. ತನ್ನನ್ನು ಪ್ರೀತಿಸುವಂತೆ ಇನ್ಸ್ಪೆಕ್ಟರ್ ಪಾಪಣ್ಣ ಮಹಿಳಾ ರೌಡಿಶೀಟರ್ ಯಶಸ್ವಿನಿ ಗೌಡ ಹಿಂದೆ ಬಿದ್ದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ನಿತ್ಯ ವಾಟ್ಸಪ್ ಮೆಸೇಜ್ ಮತ್ತು ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

5. KSOU ಆವರಣದಲ್ಲಿ ದೀನದಯಾಳ್ ಉಪಾಧ್ಯಾಯ ತತ್ವಶಾಸ್ತ್ರದ ಕುರಿತಾದ ಸಮ್ಮೇಳನ ರದ್ದು: ವಿಜಯೇಂದ್ರ ಕಿಡಿ

ಕಾಂಗ್ರೆಸ್ ಸರ್ಕಾರ "ದ್ವೇಷ ರಾಜಕೀಯ" ಮತ್ತು "ರಾಜಕೀಯ ಹಸ್ತಕ್ಷೇಪ"ದಲ್ಲಿ ತೊಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ. ಮೈಸೂರಿನ ಕೆಎಸ್‌ಒಯು ಆವರಣದಲ್ಲಿ ನಿಗದಿಯಾಗಿದ್ದ ಹಿಂದುತ್ವ ಸಿದ್ಧಾಂತವಾದಿ ದೀನದಯಾಳ್ ಉಪಾಧ್ಯಾಯ ಅವರ ತತ್ವಶಾಸ್ತ್ರದ ಕುರಿತಾದ ಸಮ್ಮೇಳನವನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಅವರು ಟೀಕಿಸಿದ್ದಾರೆ. ಈ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡಬೇಕೆಂದು ಅವರು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರನ್ನು ಒತ್ತಾಯಿಸಿದರು."ಏಕಾತ್ಮ ಮಾನವ ದರ್ಶನ - ಭಾರತ್ಸ್ ವರ್ಲ್ಡ್‌ವ್ಯೂ, ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನವು ಆಯೋಜಿಸಬೇಕಿತ್ತು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು. ಈಮಧ್ಯೆ, ಮೂರು ದಿನಗಳ ಉಪನ್ಯಾಸ ಸರಣಿಯನ್ನು ನಿಲ್ಲಿಸುವ ಸರ್ಕಾರದ ನಿರ್ಧಾರವನ್ನು ಮಂಗಳವಾರ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಸಮರ್ಥಿಸಿಕೊಂಡರು, ಸಾರ್ವಜನಿಕ ವಿಶ್ವವಿದ್ಯಾಲಯಗಳು ರಾಜಕೀಯದಿಂದ ಮುಕ್ತವಾಗಿರಬೇಕು ಮತ್ತು ಸೈದ್ಧಾಂತಿಕ ಪ್ರಭಾವದಿಂದ ಮುಕ್ತವಾಗಿರಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com