

ಬಳ್ಳಾರಿ: ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದಲ್ಲಿ ಬಂಧಿತ ಆರೋಪಿಯನ್ನು ಬಳ್ಳಾರಿ ನಗರದ ಅಬ್ದುಲ್ ಸಲಾಮ್(36) ಎಂದು ಗುರುತಿಸಲಾಗಿದೆ. ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಒಳಗೊಂಡು ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಆಗಮಿಸಿದ್ದ ಆಂಧ್ರ ಪ್ರದೇಶ ಪೊಲೀಸರು, ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಅಬ್ದುಲ್ ಸಲಾಮ್ ನನ್ನು ಬಂಧಿಸಿದ್ದಾರೆ.
ಪಂಚನಾಮೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಉಗ್ರವಾದ ಹರಡುವುದು ಮತ್ತು ಭಯೋತ್ಪದನಾ ಸಂಘಟನೆಗಳ ನಂಟು ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಈ ಬಗ್ಗೆ ಮಾರ್ಚ್ 23ರಂದು ವಿಜಯವಾಡ ಟೌನ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ಆರಂಭಿಸಿದ್ದರು.
ಸರ್ಚ್ ವಾರೆಂಟ್ ಪಡೆದು ಕಾರ್ಯಾಚರಣೆಗಿಳಿದಿದ್ದ ಪೊಲೀಸರು, ವಿಜಯವಾಡದ ವಿಂಚ್ಪೇಟ್ನಲ್ಲಿ ಪ್ರಮುಖ ಅರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಿದ್ದಾಂತ ಮತ್ತು ಮೂಲಭೂತವಾದಿ ಐಎಸ್‌ಐಎಸ್ ಸಂಘಟನೆಗಳ ವಿಚಾರಧಾರೆ ಪ್ರಚಾರ ನಿರತರ ಬಗ್ಗೆ ಆತ ನೀಡಿದ್ದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ.
Advertisement