ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರವಿದೆ, ಅಲ್ಲಿ 3ನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ: BJPಗೆ ಕರವೇ ಸವಾಲು

ನಮ್ಮ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ನಮಗೇನು ಹಕ್ಕಿದೆ? ಯಾಕೆ ಅವರ ಮೇಲೆ ಇಂಥ ದೌರ್ಜನ್ಯ? ಯಾವತ್ತಾದರೂ ಯೋಚಿಸಿದ್ದೀರಾ? ದಶಕಗಳಿಂದ ಕನ್ನಡದ ಮಕ್ಕಳು ಈ ದೌರ್ಜನ್ಯ ಅನುಭವಿಸಿದ್ದಾರೆ.
karave (File photo)
ಕರವೇ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಎಂದು ಬಿಜೆಪಿಗೆ ಕರ್ನಾಟಕ ರಕ್ಷಣಾ ವೇದಿಕೆ ಸವಾಲು ಹಾಕಿದೆ.

ಹಿಂದಿ ಸೇರಿ ತೃತೀಯ ಭಾಷೆಗಳ ಅಂಕಗಳಿಗೆ ರಾಜ್ಯ ಸರ್ಕಾರ ಕೊಕ್ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಿಡಿಕಾರಿದ್ದರು. ಈ ಹೇಳಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SSLC ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಿಮ್ಮ ಹೇಳಿಕೆ ಗಮನಿಸಿದೆ. ನಿಮ್ಮ ಒಟ್ಟು ಹೇಳಿಕೆಯು ಆತ್ಮಘಾತಕತನದಿಂದ ಕೂಡಿದೆ, ಕನ್ನಡದ ಮಕ್ಕಳ ಭವಿಷ್ಯದ ವಿರುದ್ಧವಾಗಿದೆ, ಕನ್ನಡಿಗರ ಆಶೋತ್ತರಗಳನ್ನು ಹೀಯಾಳಿಸುವಂತೆ ಇದೆ. ಇಂಥ ಹೇಳಿಕೆಯನ್ನು ನಿಮ್ಮಿಂದ ನಾನು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.

2023-2024ರ SSLC ಪರೀಕ್ಷೆಯಲ್ಲಿ 90,000ಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. 2024-25ರಲ್ಲಿ ಹಿಂದಿಯೊಂದರಲ್ಲಿ 1,42,400 ಮಕ್ಕಳು ಫೇಲ್ ಆಗಿದ್ದರು. ಪ್ರತಿ ವರ್ಷ ನಮ್ಮ ಕನ್ನಡದ ಮಕ್ಕಳು ತಮ್ಮದಲ್ಲದ ಹಿಂದಿಯ ಕಡ್ಡಾಯ ಕಲಿಕೆಯಿಂದ ಒಂದು ವರ್ಷ ಕಳೆದುಕೊಳ್ಳುತ್ತಿದ್ದರು. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಮ್ಮ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ನಮಗೇನು ಹಕ್ಕಿದೆ? ಯಾಕೆ ಅವರ ಮೇಲೆ ಇಂಥ ದೌರ್ಜನ್ಯ? ಯಾವತ್ತಾದರೂ ಯೋಚಿಸಿದ್ದೀರಾ? ದಶಕಗಳಿಂದ ಕನ್ನಡದ ಮಕ್ಕಳು ಈ ದೌರ್ಜನ್ಯ ಅನುಭವಿಸಿದ್ದಾರೆ. ಇನ್ನೂ ಎಷ್ಟು ಕಾಲ ಈ ಮಾನಸಿಕ ಅತ್ಯಾಚಾರವನ್ನು ಅನುಭವಿಸಬೇಕು?

karave (File photo)
ಕೇಂದ್ರದ ಮೇಲಿನ ದ್ವೇಷಕ್ಕೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುವ ಸರ್ಕಾರದ ತೀರ್ಮಾನ ವಿವೇಕ ರಹಿತ: ಹಿಂದಿ ಭಾಷೆ ಕೈಬಿಟ್ಟ ರಾಜ್ಯ ಸರ್ಕಾರದ ವಿರುದ್ಧ BJP ಕಿಡಿ

ಕಳೆದ ವರ್ಷ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ತೃತೀಯ ಭಾಷೆಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಾಯಿತು? ಯಾಕೆ ಅಲ್ಲಿ ಹಿಂದಿಯನ್ನು ತೆಗೆಯಲಾಯಿತು ಎಂಬುದನ್ನು ಅಲ್ಲಿನ ನಿಮ್ಮ ಮುಖ್ಯಮಂತ್ರಿಗಳನ್ನು ಒಮ್ಮೆ ಕೇಳಿ. ಆಗ ನೀವು ಯಾಕೆ ಮಾತನಾಡಲಿಲ್ಲ? ದೇಶದಲ್ಲೇ ಮಾದರಿ ತ್ರಿಭಾಷಾ ಶಿಕ್ಷಣ ನೀತಿಯನ್ನು ಯಾಕೆ ತೆಗೆದಿರಿ ಎಂದು ಕೇಳಬೇಕಿತ್ತಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಸರಿಯೇ?

ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದು ಹೇಳಿದ್ದೀರಿ. ಇದು ಯಾವ ಬಗ್ಗೆಯ ಚಿಂತನೆ? ಕನ್ನಡವನ್ನು, ತಮಿಳನ್ನು, ತೆಲುಗನ್ನು ಅಥವಾ ಇನ್ನುಳಿದ ಭಾಷೆಗಳನ್ನು ನೀವು ಯಾಕೆ ರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ನಮ್ಮ ಭಾಷೆಗಳೆಲ್ಲ ಬೇರೆ ದೇಶಗಳಿಂದ ಬಂದವುಗಳಾ? ಅಥವಾ ಮೂರನೇ ದರ್ಜೆ ಭಾಷೆಗಳಾ? ಹಿಂದಿಯೊಂದೇ ರಾಷ್ಟೀಯವೇ? ಬೇರೆಯ ಭಾಷೆಗಳೆಲ್ಲ ಏನು ಹಾಗಾದರೆ? ಈ ಬಾಲಿಷ, ಕುಯುಕ್ತಿಯ ಚಿಂತನೆಗಳನ್ನು ನೀವೂ ಯಾಕೆ ಪ್ರತಿಪಾದಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಒಂದು ಕೆಲಸ ಮಾಡಿ. ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ. ನೂರು ಅಂಕ ನಿಗದಿಪಡಿಸಿ. ಅಲ್ಲಿನ ಮಕ್ಕಳು ಕನ್ನಡ ಓದಿ, ಕನಿಷ್ಠ 35 ಅಂಕ ಪಡೆದು ಪಾಸಾಗಲಿ.

ಇದು ನಿಮಗೆ, ನಿಮ್ಮ ಪಕ್ಷಕ್ಕೆ ನೇರ ಸವಾಲು. ಇದು ಸಾಧ್ಯವೇ ನಿಮ್ಮಿಂದ? ಸಾಧ್ಯವಿಲ್ಲವಾದರೆ ಕರ್ನಾಟಕದ ಮಕ್ಕಳು ಮೂರನೇ ಭಾಷೆ ಹೇರಿಸಿಕೊಂಡು ಫೇಲಾಗಿ ಭವಿಷ್ಯ ಹಾಳುಮಾಡಿಕೊಳ್ಳಲಿ ಎಂದು ದಯವಿಟ್ಟು ಬೋಧನೆ ಮಾಡಬೇಡಿ. ಕನ್ನಡಿಗರು ಈಗ ಎಚ್ಚೆತ್ತುಕೊಂಡಿದ್ದಾರೆ. ಇದು ಹೊಸ ಕರ್ನಾಟಕ, ನಾವು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನಾವು ಯಾರ ಗುಲಾಮರೂ ಅಲ್ಲ ಎಂದು ಹೇಳಿದ್ದಾರೆ.

karave (File photo)
SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ: ಹಿಂದಿ ಸೇರಿ ತೃತೀಯ ಭಾಷೆಗಳು ಲೆಕ್ಕಕ್ಕಿಲ್ಲ!

ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದುʼʼ ಎಂದು ಕಾಳಜಿ ತೋರಿದ್ದೀರಿ. ಇದು ಸರಿಯಾದ ಮಾತು. ಇದಕ್ಕೆ ಸರಿಯಾದ ಉತ್ತರವೂ ನಿಮ್ಮ ಬಳಿಯೇ ಇರುತ್ತದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹೋಗುವವರಿಗೆ ಹಿಂದಿ ಗೊತ್ತಿರಲೇಬೇಕು ಎಂಬ ವಾತಾವರಣವನ್ನು ಈ ಕೂಡಲೇ ಬದಲಾಯಿಸಿ. ಕೇಂದ್ರ ಸರ್ಕಾರವನ್ನು ಹಿಂದಿ ಭಾಷಿಕರಿಗೆ ನಾವು ಬರೆದುಕೊಟ್ಟಿಲ್ಲ.

ಕೇಂದ್ರ ಸರ್ಕಾರವೆಂದರೆ ಅದು ಎಲ್ಲರ ಸರ್ಕಾರ, ಕನ್ನಡಿಗರ, ಮಲೆಯಾಳಿಗಳ, ಅಸ್ಸಾಮಿಗಳ, ಬಂಗಾಳಿಗಳ ಹೀಗೆ ಎಲ್ಲರ ಸರ್ಕಾರ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಿ. ಆಗ ನಿಮ್ಮ ಕಾಳಜಿಗೆ ಸರಿಯಾದ ಉತ್ತರ ಸಿಗುತ್ತದೆ.

ನಿಮ್ಮ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರು ಹಲವು ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಕನ್ನಡದ ವಿಷಯಕ್ಕೆ ಬಂದಾಗ ಯಾವತ್ತೂ ರಾಜಿ ಆದವರಲ್ಲ. ನಿಮ್ಮದೇ ಪಕ್ಷದವರು ಕನ್ನಡ ಬಾವುಟ ಹಾರಿಸಬಾರದು ಎಂದು ಆದೇಶ ಹೊರಡಿಸಿದಾಗಲೂ ರಾಜ್ಯೋತ್ಸವದಂದು ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ಬಾವುಟ ಹಾರಿಸಿದವರು ಅವರು. ನೀವು ಅವರ ರಾಜಕೀಯ ಪುಟಗಳಿಂದ ಈ ಸ್ವಾಭಿಮಾನದ ಪಾಠವನ್ನು ಕಲಿತ ಹಾಗೆ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ದಯವಿಟ್ಟು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿರುವವರಿಗೆ ಬುದ್ಧಿಹೇಳಿ, ಕನ್ನಡ ಪ್ರೇಮಿಗಳಾಗಿ. ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ. ಆ ಗೌರವವನ್ನು ನೀವೇ ಕಳೆದುಕೊಳ್ಳಬೇಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿನಿ ಹಾಲಿನ ವಿಷಯವು ಯಾವ ಪ್ರಮಾಣದಲ್ಲಿ ನಿಮ್ಮ ಪಕ್ಷಕ್ಕೆ ಘಾಸಿ ಮಾಡಿತು ಎಂಬುದನ್ನು ನೀವು ಮರೆತಿಲ್ಲ ಎಂಬುದನ್ನು ಭಾವಿಸುತ್ತೇನೆ. ನಾವಂತೂ ಹಿಂದಿ ಹೇರಿಕೆ ಪರವಾಗಿರುವವರನ್ನು ನಾಡದ್ರೋಹಿಗಳು ಎಂದು ತೀರ್ಮಾನಿಸಿದ್ದೇವೆ. ನೀವು ನಾಡದ್ರೋಹಿಗಳಾಗಬೇಡಿ. ನಿಮ್ಮ ಮೇಲಿನ ಪ್ರೀತಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com