Sringeri Constituency: ಕಾಂಗ್ರೆಸ್‌ಗೆ ಶಾಕ್; ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು; ನೂತನ ಶಾಸಕನಾಗಿ ಘೋಷಣೆ!

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ನಂತರ ಮೇ 2023ರಿಂದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್
ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್
Updated on

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ 255 ಮತಗಳು ಅಸಿಂಧುಗೊಂಡಿವೆ. ಇದರಿಂದಾಗಿ, ಈ ಹಿಂದೆ ಸೋತಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಇದೀಗ 52 ಮತಗಳ ಮುನ್ನಡೆ ಸಾಧಿಸಿ, ಶಾಸಕರಾಗಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ನಂತರ ಮೇ 2023ರಿಂದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಏಪ್ರಿಲ್ 6ರಂದು ಪೋಸ್ಟಲ್ ಬ್ಯಾಲೆಟ್‌ಗಳ ಮರು ಪರಿಶೀಲನೆ ಮತ್ತು ಮರು ಎಣಿಕೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಈ ಪ್ರಕ್ರಿಯೆ ಆರಂಭವಾಗಿ ಮಧ್ಯರಾತ್ರಿವರೆಗೂ ಮುಂದುವರಿಯಿತು. ಮರು ಪರಿಶೀಲನೆ ವೇಳೆ ಫಲಿತಾಂಶದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ.

ಜೀವರಾಜ್ ಅವರಿಗೆ ಮೊದಲು 692 ಮತಗಳು ಇದ್ದರೆ, ಮರು ಎಣಿಕೆಯಲ್ಲಿ 690 ಮಾನ್ಯ ಮತಗಳು ಲಭ್ಯವಾಗಿವೆ. ಆದರೆ, ರಾಜೇಗೌಡರ ಮತಗಳು 569ರಿಂದ ನೇರವಾಗಿ 314ಕ್ಕೆ ಇಳಿದಿದ್ದು, 255 ಮತಗಳ ಕಡಿತ ಕಂಡುಬಂದಿದೆ. ಈ ದೊಡ್ಡ ವ್ಯತ್ಯಾಸವೇ ಅಂತಿಮ ಫಲಿತಾಂಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ.

ಈ ಫಲಿತಾಂಶ ಬೆನ್ನಲ್ಲೇ ಚುನಾವಣಾಧಿಕಾರಿಗಳು ಜನಪ್ರತಿನಿಧಿತ್ವ ಕಾಯ್ದೆ 1951 ಮತ್ತು ಚುನಾವಣಾ ನಿಯಮಾವಳಿಗಳ ಪ್ರಕಾರ ಜೀವರಾಜ್ ಅವರನ್ನು ಅಧಿಕೃತವಾಗಿ ಶಾಸಕರಾಗಿ ಘೋಷಿಸಿದ್ದಾರೆ. ಈ ಘೋಷಣೆಯೊಂದಿಗೆ ರಾಜೇಗೌಡರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜೇಗೌಡರು ಮರು ಎಣಿಕೆ ಪ್ರಕ್ರಿಯೆಯ ಮೇಲೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಪರವಾಗಿ ಬಂದಿದ್ದ ಕೆಲವು ಬ್ಯಾಲೆಟ್‌ಗಳಲ್ಲಿ ಮಸಿ ಬದಲಾವಣೆ ಮತ್ತು ಗುರುತುಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್
ಮರು ಮತ ಎಣಿಕೆಯಲ್ಲಿ ಅಂಚೆ ಮತಪತ್ರಗಳನ್ನು ತಿರುಚಲಾಗಿದೆ: ಶಾಸಕ ಟಿ.ಡಿ ರಾಜೇಗೌಡ

ಚುನಾವಣೆಯ ಸಮಯದಲ್ಲಿ ಮಾನ್ಯ ಎಂದು ಪರಿಗಣಿಸಲ್ಪಟ್ಟ ಮತಗಳು ಈಗ ಅಮಾನ್ಯ ಎಂದು ಘೋಷಿಸಿರುವುದು ಸಂಶಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರ ಮತ ಎಣಿಕೆ ಏಜೆಂಟ್ ಆಗಿ ಸೇವೆ ಸಲ್ಲಿಸಿದ್ದ ಸುಧೀರ್ ಕುಮಾರ್ ಮುರೊಳ್ಳಿ ಅವರು, ಚಿಕ್ಕಮಗಳೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 255 ಮತಪತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಹಿಂದಿನ ಚುನಾವಣಾಧಿಕಾರಿ ಸೇರಿದಂತೆ ಹಲವು ಮಂದಿಯ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಘಟನೆ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ವಿಶೇಷವಾಗಿ ಪೋಸ್ಟಲ್ ಬ್ಯಾಲೆಟ್‌ಗಳ ನಿರ್ವಹಣೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಕಾನೂನು ಹೋರಾಟದ ಮೂಲಕ ಚುನಾವಣಾ ಫಲಿತಾಂಶವೂ ಬದಲಾಗಬಹುದು ಎಂಬುದಕ್ಕೆ ಶೃಂಗೇರಿ ಘಟನೆ ಪ್ರಮುಖ ಉದಾಹರಣೆಯಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com