

ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವಚನಾನಂದ ಸ್ವಾಮೀಜಿ ಅವರು ವಿಚಾರಣೆಗಾಗಿ ಗುರುವಾರ ಹರಿಹರ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಸುಮಾರು ಐದು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದರು.
ಬೆಳಿಗ್ಗೆ 9 ಗಂಟೆಗೆ ಆರಂಭವಾದ ವಿಚಾರಣೆ ಸಂಜೆ 4 ಗಂಟೆಯವರೆಗೆ ಮುಂದುವರೆಯಿತು. ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ತನಿಖೆ ನಡೆಯಿತು ಎಂದು ತಿಳಿದುಬಂದಿದೆ.
ವಿಚಾರಣೆ ಬಳಿಕ ವಚನಾನಂದ ಸ್ವಾಮೀಜಿ ಅವರನ್ನು ಹರಿಹರ ತಾಲೂಕು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು.
ಆಸ್ಪತ್ರೆಗೆ ತೆರಳುವ ವೇಳೆ ಮಾತನಾಡಿದ ಅವರು, “ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತೇನೆ,” ಎಂದು ಹೇಳಿದರು.
ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞ ಡಾ. ರಾಘವೇಂದ್ರ ದುರ್ಗೋಜಿ ಅವರು, ಸ್ವಾಮೀಜಿಯ ವೈದ್ಯಕೀಯ ಪರೀಕ್ಷೆ ನಡೆಸಿದರು. ಪೋಕ್ಸೋ ಪ್ರಕರಣಗಳಿಗೆ ಅಗತ್ಯವಿರುವ ಎಲ್ಲಾ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉಗುರು, ಕೂದಲು, ಬಟ್ಟೆ ಸೇರಿದಂತೆ ವಿವಿಧ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದ ರಕ್ತದೊತ್ತಡ, ಶುಗರ್ ಹಾಗೂ ಪಲ್ಸ್ ಪರೀಕ್ಷೆಯನ್ನೂ ನಡೆಸಲಾಗಿದೆ. ಸ್ವಾಮೀಜಿ ಆರೋಗ್ಯವಾಗಿದ್ದಾರೆ,” ಎಂದು ವೈದ್ಯರು ಮಾಹಿತಿ ನೀಡಿದರು. ಪರೀಕ್ಷಾ ವರದಿ ಸುಮಾರು 15 ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಇದೇ ವೇಳೆ ಸ್ವಾಮೀಜಿಯ ಬೆಂಬಲಿಗರು ಹರಿಹರ ಗ್ರಾಮೀಣ ಪೊಲೀಸ್ ಠಾಣೆ ಎದುರು ಸೇರಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣವು ಮಠದ ಟ್ರಸ್ಟ್ ರೂಪಿಸಿದ ಸಂಚು ಎಂದು ಆರೋಪಿಸಿದ ಭಕ್ತರು, ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠ ಖಾಲಿ ಮಾಡಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ವಚನಾನಂದ ಶ್ರೀ ಭಕ್ತ ಹಾಗೂ ಜವಾಬ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಪರಮೇಶ್ವರ ಗೌಡ ಮಾತನಾಡಿ, “ಇದು ಸಂಪೂರ್ಣ ಸಂಚು. ಸ್ವಾಮೀಜಿಯ ವಿರುದ್ಧ ಆಧಾರರಹಿತ ಆರೋಪ ಮಾಡಲಾಗುತ್ತಿದೆ. ನಾವು ಸ್ವಾಮೀಜಿಯ ಜೊತೆ ನಿಲ್ಲುತ್ತೇವೆ. ಕಾನೂನಿನ ಮೇಲೆ ನಮಗೆ ನಂಬಿಕೆ ಇದೆ,” ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್, “ವಚನಾನಂದ ಸ್ವಾಮೀಜಿಯನ್ನು ಹರಿಹರ ಗ್ರಾಮೀಣ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಯಲಾಗಿತ್ತು. ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದ್ದು, ಸಂಗ್ರಹಿಸಿದ ಮಾದರಿಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement