

ಬೆಂಗಳೂರು: ಬೆಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿರುವ ಬಿಡದಿ ವ್ಯಾಪ್ತಿಯ ಬೈರಮಂಗಲ ಮತ್ತು ಕುಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ ರೈತರ ಸಂಘಟನೆ ಬೈರಮಂಗಲ ಮತ್ತು ಕುಂಚುರಗಾನಹಳ್ಳಿ ರೈತರ ಭೂ ಹೋರಾಟ ಹಿತರಕ್ಷಣ ಸಂಘ, ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗೆ 80 ಶೇಕಡಾ ರೈತರು ಒಪ್ಪಿಗೆ ನೀಡಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ತಳ್ಳಿಹಾಕಿದೆ. ಈ ಯೋಜನೆಗಾಗಿ ತಮ್ಮ ಭೂಮಿಯನ್ನು ನೀಡಲು ನಾವು ಸಿದ್ಧರಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
ಬೈರಮಂಗಲ ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಚ್.ಜಿ. ಪ್ರಕಾಶ್, ಬೈರಮಂಗಲ ಗ್ರಾಮ ಪಂಚಾಯಿತಿಯ ಮಂಡಲಹಳ್ಳಿ ಗ್ರಾಮದ ರೈತ ನಾಗರಾಜ್ ಹಾಗೂ ಇತರರು, ಡಿಸಿಎಂ ಜೊತೆ ಕಾಣಿಸಿಕೊಂಡು ಯೋಜನೆ ಪರವಾಗಿ ಮಾತನಾಡುತ್ತಿರುವವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು; ಆದ್ದರಿಂದ ಅವರು ರೈತರ ಹಿತಾಸಕ್ತಿಗಾಗಿ ಮಾತನಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
ರೈತರು ಕೃಷಿಯನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಬಯಸುತ್ತಿದ್ದಾರೆ. ಡಿಸಿಎಂ ಜೊತೆ ಕಾಣಿಸಿಕೊಂಡ ಕೆಲವರು ದೊಡ್ಡ ಜಮೀನುದಾರರು. ಅವರಿಗೆ ಈ ಯೋಜನೆಯಿಂದ ಲಾಭವಾಗಬಹುದು. ಆದರೆ ನಮ್ಮ ಚಿಂತೆ ಕಡಿಮೆ ಜಮೀನು ಹೊಂದಿರುವ ಅಥವಾ ಬಾಡಿಗೆ ಜಮೀನಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸುವ ನೂರಾರು ರೈತರ ಬಗ್ಗೆ ಎಂದಿದ್ದಾರೆ.
ಸಣ್ಣ ರೈತರ ಹಿತಾಸಕ್ತಿಯನ್ನು ಕಾಪಾಡುವುದಾಗಿ ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಡಿಸಿಎಂ ಭರವಸೆ ನೀಡಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ ಎಂದು ನಾವು ಆಶಿಸುತ್ತೇವೆ ಎಂದು ಪ್ರಕಾಶ್ ಹೇಳಿದರು.
ಮಂಡಲಹಳ್ಳಿ ಗ್ರಾಮದ 40 ಎಕರೆ ಕುಟುಂಬ ಜಮೀನು ಹೊಂದಿರುವ ನಾಗರಾಜ್, ಬರಭೂಮಿಯನ್ನು ನೀರಾವರಿ ಭೂಮಿಯಾಗಿ ಪರಿವರ್ತಿಸಲು ರೈತರಿಗೆ 20 ವರ್ಷಗಳು ಬೇಕಾಯಿತು. ಆದರೆ ಈಗ ಸರ್ಕಾರ ಅದನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸಲು ಮುಂದಾಗಿದೆ ಎಂದು ಹೇಳಿದರು.
ಕೃಷಿಯೇ ನಮ್ಮ ಗುರುತು. ಡಿಸಿಎಂ ಅದನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ. ಯೋಜನೆ ಪರವಾಗಿ ಮಾತನಾಡುವವರು ಬಹಳ ಕಡಿಮೆ ಸಂಖ್ಯೆಯವರು, ಲಾಲಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ಸಮೀಕ್ಷೆ ನಡೆಸಿದರೆ, ಡಿಸಿಎಂ ಮಾಡಿದ ಹೇಳಿಕೆಯನ್ನು ಬಹುತೇಕ ರೈತರು ತಿರಸ್ಕರಿಸುತ್ತಾರೆ ಎಂದು ನಾಗರಾಜ್ ಹೇಳಿದರು.
ಯೋಜನೆಗೆ ವಿರೋಧ ವ್ಯಕ್ತಪಡಿಸಲು ಸರ್ಕಾರಕ್ಕೆ ಸಂದೇಶ ರವಾನಿಸುವ ಉದ್ದೇಶದಿಂದ ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಭಾರೀ ಪ್ರತಿಭಟನೆ ನಡೆಸಲು ರೈತ ಸಮುದಾಯ ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
2 ಎಕರೆಗಳಿಂದ 30 ಎಕರೆವರೆಗೆ ಜಮೀನು ಹೊಂದಿರುವ 179 ರೈತರು ಬೆಂಗಳೂರಿನಲ್ಲಿರುವ ಡಿಸಿಎಂ ಅವರ ಅಧಿಕೃತ ನಿವಾಸದಲ್ಲಿ ಭೇಟಿ ನೀಡಿ ಟೌನ್‌ಶಿಪ್ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಜಿ ಎನ್ ನಟರಾಜು ತಿಳಿಸಿದ್ದಾರೆ.
170ಕ್ಕೂ ಹೆಚ್ಚು ರೈತರಿಂದ ಸರ್ಕಾರಕ್ಕೆ 2,669 ಎಕರೆ ಭೂಮಿ ಲಭ್ಯವಾಗಲಿದ್ದು, ರೈತರಿಗೆ ಉತ್ತಮ ಪರಿಹಾರ ಮತ್ತು ಹೆಚ್ಚುವರಿ ಸೌಲಭ್ಯಗಳನ್ನೂ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಭೂಸ್ವಾಧೀನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದಾಗ ಆರಂಭದಲ್ಲಿ 1,367 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 258 ಮಂದಿ ವಿಚಾರಣೆಗೆ ಗೈರಾಗಿದ್ದರು. ವಿಶೇಷವೆಂದರೆ, ವಿಚಾರಣೆಯ ದಿನವೇ 567 ರೈತರು ತಮ್ಮ ಭೂಮಿಯನ್ನು ನೀಡಲು ಒಪ್ಪಿಕೊಂಡಿದ್ದರು ಎಂದು ನಟರಾಜು ಹೇಳಿದರು.
Advertisement