

ಬೆಂಗಳೂರು: ರಾಜ್ಯ ಸಚಿವ ಸಂಪುಟ 2022ರ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ಸೇರಿ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಿರುವ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಶಿವಲಿಂಗ ಅಪವಿತ್ರಗೊಳಿಸಲಾಗಿದೆ ಎಂಬ ಆರೋಪದ ಬಳಿಕ ಆಳಂದದ ಲಾಡ್ಲೆ ಮಶಾಕ್ ದರ್ಗಾ ಬಳಿ 2022ರಲ್ಲಿ ಭುಗಿಲೆದ್ದಿದ್ದ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಲು ಮುಂದಾಗಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, “ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದು ದುರದೃಷ್ಟಕರ. ಸಮಾಜ ವಿರೋಧಿ ಶಕ್ತಿಗಳನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ?” ಎಂದು ಪ್ರಶ್ನಿಸಿದ್ದಾರೆ.
ಈ ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ಓಲೈಕೆಯ ಕೀಳು ರಾಜಕೀಯ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿಯ ನಿರ್ಲಜ್ಜ ಪ್ರದರ್ಶನಕ್ಕೆ ರಾಜ್ಯ ಈಗ ಸಾಕ್ಷಿಯಾಗಿದೆ. ಕನಿಷ್ಠ ಜವಾಬ್ದಾರಿಯೂ ಇಲ್ಲದೆ, ನೈತಿಕತೆ, ಗೌರವಗಳೆಲ್ಲವನ್ನೂ ಗಾಳಿಗೆ ತೂರಿ, ಸಭ್ಯತೆಯ ಎಲ್ಲಾ ಮಿತಿಗಳನ್ನೂ ಈ ತುಘಲಕ್ ಕಾಂಗ್ರೆಸ್ ಸರ್ಕಾರ ದಾಟಿದೆ.
ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪವಿತ್ರ ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ, ದಾರ್ಷ್ಟ್ಯ ಮೆರೆದಿದ್ದಲ್ಲದೆ, ಆ ಸಮಯದಲ್ಲಿ ಅಂದಿನ ಕೇಂದ್ರ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ಕಲ್ಲು ತೂರಾಟ ನಡೆಸಿದ್ದ ಘೋರ ಅಪರಾಧ ಮತ್ತು ಹೀನಾಯ ಕೋಮು ಗಲಭೆಯ 13 ಪ್ರಕರಣಗಳನ್ನು ಈ ತುಘಲಕ್ ಸರ್ಕಾರ ವಾಪಸ್ ಪಡೆದಿರುವುದನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ.
ಸಮಾಜದ ಶಾಂತಿ ಕದಡಿದ ಇಂತಹ ಗಂಭೀರ ಅಪರಾಧದ ಸಮಾಜವಿರೋಧಿ ಕಿಡಿಗೇಡಿಗಳನ್ನು ರಾಜಾರೋಷವಾಗಿ ಮುಕ್ತಗೊಳಿಸುವ ಮೂಲಕ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ ಮುಖ್ಯಮಂತ್ರಿಗಳೇ? ಈ ಕಾಂಗ್ರೆಸ್ ಸರ್ಕಾರಕ್ಕೆ, ಹಿಂದೂ ಧರ್ಮದ ಬಗ್ಗೆ ಕನಿಷ್ಟ ಗೌರವ, ಹಿಂದೂಗಳ ಮನಸ್ಸಿಗೆ ಆಗಿರುವ ನೋವು, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕನಿಷ್ಠ ಸಂವೇದನೆ, ಗೌರವವಾದರೂ ಉಳಿದಿದೆಯೇ? ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರು ಪ್ರಕರಣ ಹಿಂಪಡೆಯಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂಬ ವರದಿಯನ್ನು ಉಲ್ಲೇಖಿಸಿದ ವಿಜಯೇಂದ್ರ ಅವರು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ ವಿಧಾನಸಭಾ ಸಭಾಧ್ಯಕ್ಷರಾದ ಮಾನ್ಯ ಶ್ರೀ ಯು.ಟಿ.ಖಾದರ್ ಅವರೇ ಸ್ವತಃ ಈ ದುರುಳ ದಗಾಕೋರರ ಪ್ರಕರಣಗಳನ್ನು ಹಿಂಪಡೆಯಲು ಶಿಫಾರಸು ಮಾಡಿರುವ ವರದಿ ಮತ್ತಷ್ಟು ಖೇದನೀಯ ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಕಿಡಿಕಾರಿದ್ದಾರೆ.
ಇದು ನಿಜಕ್ಕೂ ಅತ್ಯಂತ ದುರ್ದೈವದ ಸಂಗತಿ. ಕೇವಲ ನಿಮ್ಮ ಕೊಳಕು ಓಲೈಕೆಗಾಗಿ, ಸಮಾಜಘಾತುಕ ಶಕ್ತಿಗಳಿಗೆ, ಅಪರಾಧಿಗಳಿಗೆ ಕ್ಲೀನ್ ಚೀಟ್ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಹಾಗೂ ನಾಡಿನ ಸುರಕ್ಷತೆಯನ್ನು ಮುಸ್ಲಿಂ ವೋಟ್ ಬ್ಯಾಂಕಿಗೆ ಅಡವಿಟ್ಟಿರುವ ನಿಮ್ಮ ಈ ಜನವಿರೋಧಿ ಧೋರಣೆಯನ್ನು ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರುಮಾತನಾಡಿ, “ರೈತರು ಮತ್ತು ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯುವ ನೆಪದಲ್ಲಿ ಸಮಾಜ ವಿರೋಧಿ ಶಕ್ತಿಗಳನ್ನೂ ಕಾಂಗ್ರೆಸ್ ಸರ್ಕಾರ ಸೇರಿಸಿದೆ. ಕಾನೂನು ರಕ್ಷಿಸುವ ಬದಲು ಒಂದು ಸಮುದಾಯವನ್ನು ತೃಪ್ತಿಪಡಿಸುವ ರಾಜಕೀಯ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಆಳಂದ ಪಟ್ಟಣದ ಲಾಡ್ಲೆ ಮಶಾಖ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗವನ್ನು ಮೂತ್ರ ವಿಸರ್ಜನೆಯ ಮೂಲಕ ಅಪವಿತ್ರಗೊಳಿಸಿದ್ದ, ಮಹಾಶಿವರಾತ್ರಿ ನಿಮಿತ್ತ ಶಿವಲಿಂಗದ ಶುದ್ಧೀಕರಣ ಪೂಜೆ ಹಮ್ಮಿಕೊಂಡಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಹಾಗೂ ಪೊಲೀಸರ ಮೇಲೂ ದೌರ್ಜನ್ಯ ಎಸಗಿದ್ದ ದುಷ್ಕರ್ಮಿಗಳ ಮೇಲಿನ ಪ್ರಕರಣಗಳನ್ನು ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ.
ಮುಸ್ಲಿಂ ಲೀಗ್ ನೊಂದಿಗೆ ಕೈಜೋಡಿಸಿರುವ ಕಾಂಗ್ರೆಸ್ ಈಗ Congress (M) ಆಗಿ ಪರಿವರ್ತನೆಗೊಂಡಂತಿದೆ. ಕಾಂಗ್ರೆಸ್ಸಿನ ಹಿಂದೂ ವಿರೋಧಿ ನೀತಿ ISIS ಸಿದ್ದಾಂತವನ್ನೂ ಮೀರಿಸುತ್ತಿದೆ. ಈ ಮತಾಂಧರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಹಿಂದೂಗಳ ಭಾವನೆಗಳನ್ನು ಕೆಣಕಿದ್ದಲ್ಲದೆ, ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಕಿಡಿಕಾರಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, “ಕನ್ನಡ ಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಹಲವು ವರ್ಷಗಳಿಂದ ತಮ್ಮ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿ ಮಾಡುತ್ತಿದ್ದರು. ಸರ್ಕಾರ ಈ ಪ್ರಕರಣಗಳನ್ನು ಸಚಿವ ಸಂಪುಟ ಉಪಸಮಿತಿಗೆ ಒಪ್ಪಿಸಿತ್ತು. ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ಬಳಿಕ ಕಾನೂನುಬದ್ಧವಾಗಿ ಹಿಂಪಡೆಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು” ಎಂದು ಸ್ಪಷ್ಟನೆ ನೀಡಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಕೂಡ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡು, “ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ರೈತರು ಮತ್ತು ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನೂ ರದ್ದು ಮಾಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
Advertisement