ಎಬೋಲಾ ತಡೆಗೆ ರಾಜ್ಯ ಸರ್ಕಾರ ಸಜ್ಜು: ಆಫ್ರಿಕಾ ದೇಶಗಳಿಂದ ಬರುವವರ ಮೇಲೆ ನಿಗಾ, ಆತಂಕ ಬೇಡ- ವದಂತಿಗಳಿಗೆ ಕಿವಿಗೊಡಬೇಡಿ; ಸಚಿವ ದಿನೇಶ್ ಗುಂಡೂರಾವ್

ಭಾರತದಲ್ಲಿ ಇದೂವರೆಗೆ ಯಾವುದೇ ಎಬೋಲಾ ಪ್ರಕರಣ ವರದಿಯಾಗಿಲ್ಲ. ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದೆ.
Health Minister Dinesh Gundurao
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಆಫ್ರಿಕಾ ದೇಶಗಳಲ್ಲಿ ಎಬೋಲಾ ಸೋಂಕು ಹರಡುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಜನರಿಗೆ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿಯನ್ನು ಆರೋಗ್ಯ ಇಲಾಖೆ ನಿಕಟವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಇದೂವರೆಗೆ ಯಾವುದೇ ಎಬೋಲಾ ಪ್ರಕರಣ ವರದಿಯಾಗಿಲ್ಲ. ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಸಿದ್ದಾರೆ.

ಉಗಾಂಡಾ ಮತ್ತು ಕಾಂಗೋ ಸೇರಿದಂತೆ ಎಬೋಲಾ ಸೋಂಕು ಕಾಣಿಸಿಕೊಂಡಿರುವ ಆಫ್ರಿಕಾ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ನಿಗಾದಲ್ಲಿಡಲಾಗುತ್ತದೆ. ಯಾವುದೇ ಲಕ್ಷಣಗಳು ಕಂಡುಬಂದ ಕೂಡಲೇ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Health Minister Dinesh Gundurao
ಎಬೋಲಾ ಭೀತಿ: ಡಿಆರ್‌ಸಿ, ಉಗಾಂಡಾ, ದಕ್ಷಿಣ ಸುಡಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಸಂಬಂಧ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜನರು ಅನಗತ್ಯ ಆತಂಕಕ್ಕೊಳಗಾಗದೇ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಇಂಧನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದರು. ಕಚ್ಚಾ ತೈಲ ಬೆಲೆಗಳು ಕಡಿಮೆಯಾದಾಗ ದೊಡ್ಡ ಆದಾಯವನ್ನು ಸಂಗ್ರಹಿಸಿದರೂ, ಕೇಂದ್ರವು ತೆರಿಗೆಗಳನ್ನು ಕಡಿಮೆ ಮಾಡಲು ವಿಫಲವಾಗಿದೆ. ಮನಮೋಹನ್ ಸಿಂಗ್ ಅವರ ಪ್ರಧಾನಿ ಅವಧಿಯನ್ನು ಉಲ್ಲೇಖಿಸಿ, “ಆ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಏರಿದಾಗ ಜನರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜನರ ಸಮಸ್ಯೆಗಳಿಗಿಂತ ಚುನಾವಣೆ ಗೆಲ್ಲುವ ರಾಜಕೀಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಕಿಡಿಕಾರಿದರು.

ನೀಟ್ ಪರೀಕ್ಷೆ ರದ್ದು ವಿಚಾರಕ್ಕೂ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ವೈದ್ಯಕೀಯ ಕೋರ್ಸ್‌ಗಳಿಗೆ ರಾಜ್ಯವೇ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಸಿದ್ಧವಿದೆ ಎಂದು ಹೇಳಿದರು.

ಸಿಇಟಿ ಮಾದರಿಯಲ್ಲಿ ಪಾರದರ್ಶಕ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಮರ್ಥ್ಯ ರಾಜ್ಯಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com