

ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಮಂಗಳವಾರ ಅರಣ್ಯ ಇಲಾಖೆಯು, ಪ್ರಸಿದ್ಧ ವಿರೂಪಾಕ್ಷ ದೇವಾಲಯಕ್ಕೆ ಸೇರಿದ 36 ವರ್ಷದ ಆನೆ ಲಕ್ಷ್ಮಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇದು ಸ್ಥಳೀಯ ನಿವಾಸಿಗಳು, ಭಕ್ತರು ಮತ್ತು ಪ್ರವಾಸಿ ಮಾರ್ಗದರ್ಶಕರಿಂದ ಭಾವನಾತ್ಮಕ ಪ್ರತಿಭಟನೆಗೆ ಕಾರಣವಾಯಿತು.
500ಕ್ಕೂ ಹೆಚ್ಚು ಸ್ಥಳೀಯರು ದೇವಾಲಯದ ಆವರಣದ ಬಳಿ ಜಮಾಯಿಸಿ ಅರಣ್ಯ ಇಲಾಖೆ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಹಲವು ವರ್ಷಗಳಿಂದ ಈ ಆನೆ ಹಂಪಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಯಾವುದೇ ಸಂದರ್ಭದಲ್ಲೂ ಆನೆಯನ್ನು ಪಾರಂಪರಿಕ ಪಟ್ಟಣದಿಂದ ತೆಗೆದುಕೊಂಡು ಹೋಗಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅರಣ್ಯ ಅಧಿಕಾರಿಗಳು ಆನೆಯನ್ನು ಸಾಗಿಸಲು ಲಾರಿಯೊಂದಿಗೆ ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳನ್ನು ತಡೆದ ಕಾರಣ ಪ್ರದೇಶದಲ್ಲಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಎಸ್ ಜಾಹ್ನವಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಆನೆಯ ವಯಸ್ಸು, ಪುನರಾವರ್ತಿತ ಗಾಯಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಗಣಿಸಿ ಲಕ್ಷ್ಮಿಯನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷ ಆರೈಕೆ ಮತ್ತು ಮೇಲ್ವಿಚಾರಣೆಗಾಗಿ ಆನೆಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಈ ಕ್ರಮವು ಆನೆಯ ಮಾವುತ ರಾಜಣ್ಣರಿಂದ ಭಾವನಾತ್ಮಕ ಪ್ರತಿಭಟನೆಗೆ ಕಾರಣವಾಯಿತು. ಲಕ್ಷ್ಮಿಯನ್ನು ಹಂಪಿಯಿಂದ ಬೇರ್ಪಡಿಸಬೇಡಿ ಎಂದು ರಾಜಣ್ಣ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು.
ರಾಜ್ಯ ಪ್ರವಾಸಿ ಮಾರ್ಗದರ್ಶಿ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ, ಹಂಪಿಯ ಜನರು ಸಾಂಪ್ರದಾಯಿಕವಾಗಿ ವಿಶ್ವದ ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಆನೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ “ಹಂಪಿ ಲಕ್ಷ್ಮಿಯನ್ನು ಉಳಿಸಿ” ಪೋಸ್ಟರ್‌ಗಳ ಮೂಲಕ ಅಭಿಯಾನ ಆರಂಭಿಸಿದ್ದು, ಸ್ಥಳೀಯರು ಈ ಆನೆ ಹಂಪಿಯಲ್ಲಿಯೇ ಉಳಿಯಬೇಕೆಂದು ಒತ್ತಾಯಿಸಿದ್ದಾರೆ.
Advertisement