

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ದೃಷ್ಟಿಹೀನ ಸ್ನೇಹಿತೆಯ ಬಳಿ ಇದ್ದ ಹಣ ಹಾಗೂ ಚಿನ್ನಾಭರಣಗಳು ಕದ್ದು, ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಖದೀಮ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ಸಂಬಂಧ ಮೇ 6 ರಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಬಿಇಎಂಎಲ್ ಲೇಔಟ್ ಪ್ರದೇಶದಲ್ಲಿರುವ ತನ್ನ ಸ್ನೇಹಿತರಾದ ದಂಪತಿಯ ಮನೆಯಲ್ಲಿ ಕಳೆದ ಎಂಟು ವರ್ಷಗಳಿಂದ ವಾಸಿಸುತ್ತಿರುವುದಾಗಿ ದೃಷ್ಟಿಹೀನ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜೂನ್ 2024 ರಲ್ಲಿ, ದೂರುದಾರರು ಬ್ಯಾಂಕ್ ಲಾಕರ್‌ನಿಂದ ಚಿನ್ನದ ಆಭರಣಗಳನ್ನು ಬೇರೆ ಲಾಕರ್‌ಗೆ ವರ್ಗಾಯಿಸುವ ಉದ್ದೇಶದಿಂದ ತೆಗೆದಿದ್ದರು. ನಂತರ ತಮ್ಮ ಸ್ನೇಹಿತರ ಮನೆಯ ಕಪಾಟಿನಲ್ಲಿ 49.50 ಲಕ್ಷ ರೂ. ನಗದು ಮತ್ತು ಆಭರಣಗಳನ್ನಿಟ್ಟು, ಕೀಲಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಕೆಲವು ದಿನಗಳ ನಂತರ, ಬೆಲೆಬಾಳುವ ವಸ್ತುಗಳನ್ನು ಬೇರೆ ಲಾಕರ್‌ಗೆ ವರ್ಗಾಯಿಸಲು ಯೋಜಿಸಿದಾಗ, ಆ ಕಪಾಟಿನ ಕೀ ಕಾಣೆಯಾಗಿರುವುದು ಕಂಡುಬಂದಿದೆ. ನಂತರ ದೂರುದಾರ ಮಹಿಳೆ ನಕಲಿ ಕೀ ಮಾಡಿಸಿ, ಕಪಾಟನ್ನು ತೆರೆದು ನೋಡಿದಾಗ ಚಿನ್ನದ ಆಭರಣಗಳು ಮತ್ತು ನಗದು ಕಾಣೆಯಾಗಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಪ್ರಶ್ನಿಸಿದಾಗ, ದಂಪತಿಗಳು ಹಣಕಾಸಿನ ತೊಂದರೆಯಿಂದ ಆ ಹಣವನ್ನು ಬಳಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಚಿನ್ನದ ಆಭರಣಗಳನ್ನು ಆಭರಣ ಅಂಗಡಿಯಲ್ಲಿ ಒತ್ತೆ ಇಡಲಾಗಿದೆ ಎಂದು ಹೇಳಿದ್ದಾರೆ.
ಆರೋಪಿಗಳು ಹಣವನ್ನು ಈಗಾಗಲೇ ತಮ್ಮ ವ್ಯಾಪಾರ ಉದ್ದೇಶಗಳಿಗಾಗಿ ಖರ್ಚು ಮಾಡಿದ್ದಾರೆ ಮತ್ತು ಚಿನ್ನದ ಆಭರಣಗಳನ್ನು ಹಲಸೂರು ನಿವಾಸಿ ಸ್ನೇಹಿತರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮೇ 8 ರಂದು ಆರೋಪಿಯ ಸ್ನೇಹಿತನಿಂದ 232 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಆಭರಣಗಳ ಮೌಲ್ಯ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement