

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೊಡ್ಡ ರಿಲೀಫ್ ನೀಡಿದೆ.
2024ರಲ್ಲಿ ಅವರ ವಿರುದ್ಧ ದಾಖಲಾಗಿದ್ದ ಬಹುಚರ್ಚಿತ ಜಾತಿ ನಿಂದನೆ (ಅಟ್ರಾಸಿಟಿ) ಮತ್ತು ಜೀವ ಬೆದರಿಕೆ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ರಚಿಸಲಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಮೇ 21ರಂದು ಈ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ಅವರು ತಮ್ಮ ಮೇಲಿನ ಆರೋಪಗಳನ್ನು ವಜಾಗೊಳಿಸುವಂತೆ (Discharge Petition) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮುನಿರತ್ನ ಅವರ ಮೇಲಿನ ಈ ಜಾತಿ ನಿಂದನೆ ಪ್ರಕರಣವನ್ನು ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಯ ವಿಶೇಷ ತನಿಖಾ ದಳಕ್ಕೆ (SIT) ವಹಿಸಿತ್ತು. ಆದರೆ, ತನಿಖೆ ಪೂರ್ಣಗೊಂಡ ಬಳಿಕ ಸಲ್ಲಿಸಲಾದ ಅಂತಿಮ ವರದಿಯಲ್ಲಿ ಆರೋಪಗಳನ್ನು ಸಾಬೀತುಪಡಿಸಲು ಬೇಕಾದ ಸಮರ್ಪಕ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ಮುಂದುವರಿಯಬೇಕಾದರೆ, ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕರ ಸಮ್ಮುಖದಲ್ಲಿ ಅವಮಾನ ಮಾಡುವ ಉದ್ದೇಶದಿಂದ ಜಾತಿ ನಿಂದನೆ ನಡೆದಿರಬೇಕು. ಈ ಪ್ರಕರಣದಲ್ಲಿ ಆ ರೀತಿಯ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಮಂಡಿಸಲು ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
ಹೀಗಾಗಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ದಾಖಲಿಸಲಾಗಿದ್ದ ಆರೋಪಗಳಿಂದ ಮುನಿರತ್ನ ಅವರನ್ನು ಬಿಡುಗಡೆ ಮಾಡಲಾಗಿದೆ.
ನ್ಯಾಯಾಲಯದ ಈ ಆದೇಶದಿಂದಾಗಿ ಕಳೆದ ಕೆಲವು ಸಮಯದಿಂದ ಕಾನೂನು ಹೋರಾಟ ಎದುರಿಸುತ್ತಿದ್ದ ಮುನಿರತ್ನ ಅವರಿಗೆ ಈಗ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಕಳೆದ 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂಬ ಗಂಭೀರ ಆರೋಪ ಶಾಸಕ ಮುನಿರತ್ನ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಮತ್ತು ಪೊಲೀಸರು ಮುನಿರತ್ನ ಅವರನ್ನು ಬಂಧಿಸಿ ವಿಚಾರಣೆ ಕೂಡ ನಡೆಸಿದ್ದರು.
Advertisement