

ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನಾಡು, ನುಡಿ, ಶಿಕ್ಷಣ, ಉದ್ಯೋಗ, ಕೃಷಿ ಮತ್ತು ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ (1 ರಿಂದ 10ನೇ ತರಗತಿವರೆಗೆ) ಮತ್ತು ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ವೃತ್ತಿಪರ ಶಿಕ್ಷಣದ ಸರ್ಕಾರಿ ಸೀಟುಗಳಲ್ಲಿ ಶೇ. 7.5 ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ ಎಂದರು.
ಕೃತಕ ಬುದ್ಧಿಮತ್ತೆ (AI) ತರಬೇತಿ
ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡಲಾಗುವುದು.
ಶಿಕ್ಷಕರ ನೇಮಕ
ಶಾಲಾ ಶಿಕ್ಷಣದ ಬಲವರ್ಧನೆಗಾಗಿ 15,000 ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶಿಸಲಾಗಿದೆ. ನಗರ ಪ್ರದೇಶಗಳ (ಬೆಂಗಳೂರು ಸೇರಿ 10 ಪಾಲಿಕೆಗಳು) ಶಾಲಾ ಮಕ್ಕಳಿಗೆ ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿಯ ಅರಿವು ಮೂಡಿಸಲು ‘ಗ್ರಾಮಾನುಭವ’ (ಒಂದು ದಿನದ ಗ್ರಾಮ ವಾಸ್ತವ್ಯ) ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಲಾಗಿದೆ. 29,679 ಕೋಟಿ ರೂ. ಬಂಡವಾಳ ಹೂಡಿಕೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ಸುಮಾರು 66,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
ಉದ್ಯೋಗಾಕಾಂಕ್ಷಿಗಳಿಗಾಗಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ 'ಯುವ ಉದ್ಯೋಗ ಸೇತು' ಮೊಬೈಲ್ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ. 100 ಐಟಿಐ ಸಂಸ್ಥೆಗಳನ್ನು ಕೈಗಾರಿಕೆಗಳ ಜೊತೆ ಜೋಡಿಸಿ 10,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.
ಭೂ ಗ್ಯಾರಂಟಿ ಮತ್ತು 5 ಲಕ್ಷ ನಿವೇಶನ ವಿತರಣೆ
ಆಸ್ತಿ ಮಾಲೀಕರಿಗೆ ಭದ್ರತೆ ನೀಡಲು ಮಹತ್ವಾಕಾಂಕ್ಷೆಯ ‘ಭೂ ಗ್ಯಾರಂಟಿ’ ಜಾರಿಗೆ ತರಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 9.50 ಲಕ್ಷ ಹೊಸ ಇ-ಖಾತಾ ವಿತರಣೆ ಹಾಗೂ 3 ಲಕ್ಷ ಬಿ-ಖಾತಾಗಳನ್ನು ಎ-ಖಾತಾಗಳಾಗಿ ಪರಿವರ್ತಿಸಲಾಗುವುದು. ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬಡವರಿಗೆ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದರು.
ರೈತ ಕಲ್ಯಾಣ ಹಾಗೂ ನವ ಯೋಜನೆಗಳು
ರೈತರ ಉಚಿತ/ರಿಯಾಯಿತಿ ವಿದ್ಯುತ್ ಬಳಕೆಗಾಗಿ ಸರ್ಕಾರ 30,000 ಕೋಟಿ ರೂ ಭರಿಸುತ್ತಿದೆ. 1,000 ಚದರ ಕಿ.ಮೀ ಪ್ರದೇಶದಲ್ಲಿ ಡ್ರೋನ್ ಹಾಗೂ ಉಪಗ್ರಹ ಆಧಾರಿತ ಡಿಜಿಟಲ್ ಬೆಳೆ ಸಮೀಕ್ಷೆ.
ಸಾವಯವ ಕೃಷಿಗೆ ‘ವಸುಧಾಮೃತ’, ರೈತರ ಆದಾಯ ಹೆಚ್ಚಿಸಲು ‘ತೇಗ ಸಿರಿ’ ಹಾಗೂ ಬಡ ರೈತರ ಭೂಮಿ ಉಳುಮೆಗೆ ‘ನೇಗಿಲಯೋಗಿ’ ಯೋಜನೆಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ ಎಂದರು.
ಆರೋಗ್ಯ ಮತ್ತು ನಗರಾಭಿವೃದ್ಧಿ
100 ಹೊಸ ಆಂಬುಲೆನ್ಸ್‌ಗಳ ಲೋಕಾರ್ಪಣೆ ಮಾಡಲಾಗುತ್ತಿದ್ದು, ವೈದ್ಯಕೀಯ ಕಾಲೇಜುಗಳ ಮೂಲಕ 11 ಸರ್ಕಾರಿ ಆಸ್ಪತ್ರೆಗಳ ದತ್ತು ಸ್ವೀಕಾರ ಪ್ರಕ್ರಿಯೆ ಆರಂಭವಾಗಿದೆ. ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ–2047’ ರ ಅಡಿಯಲ್ಲಿ ಮುಂದಿನ 20 ವರ್ಷಗಳಲ್ಲಿ ರಾಜ್ಯದಲ್ಲಿ ₹5 ಲಕ್ಷ ಕೋಟಿ ಮೂಲಸೌಕರ್ಯ ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ.
ಕ್ರೀಡಾಪಟುಗಳಿಗೆ ಭರ್ಜರಿ ಪ್ರೋತ್ಸಾಹ
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಚಿನ್ನಕ್ಕೆ 1 ಕೋಟಿ, ಬೆಳ್ಳಿಗೆ 75 ಲಕ್ಷ ಮತ್ತು ಕಂಚಿಗೆ 50 ಲಕ್ಷ ನಗದು ಬಹುಮಾನ ನೀಡಲಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ.2 ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ.3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. 'ಗುರಿ ಒಲಿಂಪಿಕ್ಸ್' ಯೋಜನೆಯಡಿ ತರಬೇತಿಗೆ 10 ಲಕ್ಷ ರೂಪಾಯಿ ನೆರವು ನೀಡಲಾಗುತ್ತಿದೆ ಎಂದರು.