

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸಮಸ್ತ ಕನ್ನಡಿಗರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕನ್ನಡದ ಅಸ್ಮಿತೆಯನ್ನು ಮುಂದಿನ ತಲೆಮಾರುಗಳಿಗೂ ಹೆಮ್ಮೆಯಿಂದ ಕೊಂಡೊಯ್ಯಬೇಕು ಎಂದು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ಹಂಚಿಕೊಂಡಿರುವ ಅವರು, ಕನ್ನಡವೇ ಉಸಿರು, ಕರುನಾಡೇ ಹೆಮ್ಮೆ, ಕನ್ನಡಿಗರೇ ನಮ್ಮ ಶಕ್ತಿ ಎಂದು ಹೇಳಿದ್ದಾರೆ.
ಕಾವೇರಿಯಿಂದ ಕರಾವಳಿಯವರೆಗೆ, ಮಲೆನಾಡಿನಿಂದ ಬಯಲುಸೀಮೆಯವರೆಗೆ ಕನ್ನಡದ ಕಂಪು ಪಸರಿಸಲಿ, ಕನ್ನಡದ ಕೀರ್ತಿ ವಿಶ್ವದಾದ್ಯಂತ ಮೊಳಗಲಿ ಎಂದು ಹಾರೈಸಿದ್ದಾರೆ.
ಮತ್ತೊಂದು ಸಂದೇಶದಲ್ಲಿ ಕನ್ನಡ ರಾಜ್ಯೋತ್ಸವವನ್ನು 'ಪ್ರಗತಿಯ ನಿತ್ಯೋತ್ಸವ' ಎಂದು ಬಣ್ಣಿಸಿರುವ ಮುಖ್ಯಮಂತ್ರಿ, ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಬದುಕಿನ ಸೊಬಗನ್ನು ಹೊಂದಿರುವ ಕನ್ನಡ ನಾಡಿಗೆ ನಮನ ಸಲ್ಲಿಸಿದ್ದಾರೆ.
ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ ಮತ್ತು ಬದುಕಿನ ಉಸಿರು. ಕನ್ನಡದ ಕಂಪು ಜಗದಗಲ ಪಸರಿಸಲಿ, ಕನ್ನಡಿಗರ ಹೆಮ್ಮೆ ನಿತ್ಯವೂ ಬೆಳಗಲಿ. ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡೋಣ ಎಂದು ಸಂದೇಶ ನೀಡಿದ್ದಾರೆ.
"ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎಂಬ ಹೆಮ್ಮೆಯ ನುಡಿಯೊಂದಿಗೆ, ೧೯೭೩ರ ನವೆಂಬರ್ ೧ರಂದು ಸಮಸ್ತ ಕನ್ನಡಿಗರ ಬಹುಕಾಲದ ಕನಸು ನನಸಾಗಿ 'ಮೈಸೂರು ರಾಜ್ಯ'ವು 'ಕರ್ನಾಟಕ'ವಾಗಿ ಮರುನಾಮಕರಣಗೊಂಡ ಐತಿಹಾಸಿಕ ದಿನವಿದು. ನಾಡಿನ ಈ ಭವ್ಯ ಇತಿಹಾಸವನ್ನು ಎಂದಿಗೂ ಮರೆಯದೆ, ಕನ್ನಡಿಗರೆಲ್ಲರೂ ಒಗ್ಗೂಡಿ ನಮ್ಮ ಕನ್ನಡದ ಹಿರಿಮೆಯನ್ನು ವಿಶ್ವದೆತ್ತರಕ್ಕೆ ಮೆರೆಸೋಣ.
ಕಾವೇರಿಯಿಂದ ಕರಾವಳಿಯವರೆಗೆ, ಮಲೆನಾಡಿನಿಂದ ಬಯಲುಸೀಮೆಯವರೆಗೆ ಕನ್ನಡದ ಕಂಪು ಪಸರಿಸಲಿ, ಕನ್ನಡದ ಕೀರ್ತಿ ವಿಶ್ವದಾದ್ಯಂತ ಮೊಳಗಲಿ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕನ್ನಡದ ಅಸ್ಮಿತೆಯನ್ನು ಮುಂದಿನ ತಲೆಮಾರುಗಳಿಗೂ ಹೆಮ್ಮೆಯಿಂದ ಕೊಂಡೊಯ್ಯೋಣ ಎಂದು ಹೇಳಿದ್ದಾರೆ.
ಇದೇ ವೇಳೆ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಘೋಷವಾಕ್ಯದೊಂದಿಗೆ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.