

ಬೆಂಗಳೂರು: ಕರ್ನಾಟಕದಿಂದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಘೋಷಿಸಿದ್ದಾರೆ.
ಬೆಂಗಳೂರು-ಮುಂಬೈ ಮಾರ್ಗದಲ್ಲಿ ದೇಶದ ಮೂರನೇ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊಸ ರೈಲು ಹುಬ್ಬಳ್ಳಿ ಮೂಲಕ ಸಂಚರಿಸಲಿದ್ದು, ಬೆಂಗಳೂರು, ಪುಣೆ ಮತ್ತು ಮುಂಬೈ ನಗರಗಳನ್ನು ಸಂಪರ್ಕಿಸಲಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಮುಂದಿನ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನಿಂದ ಆರಂಭವಾಗಲಿದೆ. ಹುಬ್ಬಳ್ಳಿ ಮೂಲಕ ಉತ್ತರ ಕರ್ನಾಟಕದ ವಿವಿಧ ಭಾಗಗಳನ್ನು ಸಂಪರ್ಕಿಸಿ, ಬಳಿಕ ಪುಣೆ ಮತ್ತು ಮುಂಬೈಗೆ ತೆರಳಲಿದೆ ಎಂದು ಹೇಳಿದರು.
ಬೆಂಗಳೂರಿನ ಮೊದಲ ವಂದೇ ಭಾರತ್ ಸ್ಲೀಪರ್ ರೈಲು (ಎಸ್‌ಎಂಟಿವಿ ಬೆಂಗಳೂರು-ಸಿಎಸ್‌ಎಂಟಿ ಮುಂಬೈ) ತನ್ನ ಪ್ರಯಾಣದ ವೇಳೆ ಎಂಟು ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. ಅವುಗಳೆಂದರೆ ಅನಂತಪುರ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್. ಬೆಂಗಳೂರು-ಮುಂಬೈ-ಬೆಂಗಳೂರು ಮಾರ್ಗದಲ್ಲಿ ಒಟ್ಟು ಎರಡು ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ನಿಯೋಜಿಸಲಾಗುತ್ತದೆ.
ಇದೇ ವೇಳೆ ಬೆಂಗಳೂರಿನಿಂದ ಹೊಸ ವಂದೇ ಭಾರತ್ ಚೇರ್ ಕಾರ್ ರೈಲು ಸೇವೆಯನ್ನೂ ಸಚಿವರು ಘೋಷಿಸಿದರು.
ಮಂಗಳೂರು ನಮಗೆ ಅತ್ಯಂತ ಪ್ರಮುಖ ನಗರವಾಗಿದೆ. ವಿದ್ಯುದೀಕರಣ ಪೂರ್ಣಗೊಂಡಿದ್ದು, ಪರೀಕ್ಷಾ ಪ್ರಕ್ರಿಯೆಯೂ ಮುಗಿದಿರುವುದರಿಂದ ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಇದು ಇಡೀ ಪ್ರದೇಶವನ್ನು ಸಂಪರ್ಕಿಸಲಿದೆ ಎಂದು ತಿಳಿಸಿದರು.
ಅಕ್ಟೋಬರ್ 30ರಂದು ರೈಲ್ವೆ ಮಂಡಳಿಯು ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಚೇರ್ ಕಾರ್ ರೈಲು ಸೇವೆಗೆ ಅನುಮೋದನೆ ನೀಡಿತ್ತು. ಯಶವಂತಪುರ-ಮಡಗಾಂವ್ ಮಾರ್ಗದಲ್ಲಿ ಸಂಚರಿಸುವ 26655/26656 ಸಂಖ್ಯೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 12 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಈ ನಿಲ್ದಾಣಗಳೆಂದರೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರಸ್ತೆ ಮತ್ತು ಕಾರವಾರ.
ರೈಲು ಸಂಖ್ಯೆ 26655: ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗ್ಗೆ 7.35ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ರೈಲು ಸಂಚರಿಸಲಿದೆ.
ರೈಲು ಸಂಖ್ಯೆ 26656: ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗ್ಗೆ 8.20ಕ್ಕೆ ಮಡಗಾಂವ್‌ನಿಂದ ಹೊರಟು ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ. ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ರೈಲು ಸಂಚರಿಸಲಿದೆ.