

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಬಹುದಿನಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಮೊದಲ ಹಂತದ ಉದ್ಘಾಟನೆ ನವೆಂಬರ್ 13 ರಂದು ನಡೆಯಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಿ, ನವೆಂಬರ್ 15 ರಂದು ಮಾರ್ಗವನ್ನು ಲೋಕಾರ್ಪಣೆಗೊಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು. ಆದರೆ, ಪ್ರಧಾನಿಯವರ ಕರ್ನಾಟಕ ಪ್ರವಾಸದ ವೇಳಾಪಟ್ಟಿಗೆ ಅನುಗುಣವಾಗಿ ಇದೀಗ ಎರಡು ದಿನ ಮುಂಚಿತವಾಗಿ, ಅಂದರೆ ನವೆಂಬರ್ 13ಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಸಂಸದರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ "November 13th. 🩷 #PinkLine" ಎಂದು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಈಗ ಸಿಎಂ ಹೇಳಿದ್ದ ದಿನಾಂಕಕ್ಕಿಂತ ಎರಡು ದಿನ ಮುಂಚಿತವಾಗಿಯೇ ಮೆಟ್ರೋ ಹಳಿಗೆ ಇಳಿಯಲು ಸಜ್ಜಾಗಿದೆ.
ಯಾವ ಮಾರ್ಗ ಮುಕ್ತ?
ಈ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಒಟ್ಟು 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಅದರಂತೆ, ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಒಟ್ಟು 6 ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಲಿವೆ. ಒಟ್ಟಾರೆಯಾಗಿ, ಈ ಮಾರ್ಗದ ಆರಂಭದೊಂದಿಗೆ ಬೆಂಗಳೂರು ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲವು 96.10 ಕಿ.ಮೀ ನಿಂದ 103.60 ಕಿ.ಮೀ ಗೆ ವಿಸ್ತರಣೆಯಾಗಲಿದೆ.
ಹಾಗಾದ್ರೆ, ಉಳಿದ ಸುರಂಗ ಮಾರ್ಗ ಓಪನ್ ಯಾವಾಗ?
ಈ ಪಿಂಕ್ ಲೈನ್ನ ಒಟ್ಟು 21.3 ಕಿ.ಮೀ ಮಾರ್ಗದಲ್ಲಿ, ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಉಳಿದ 13.8 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.