

ಬೆಂಗಳೂರು: ನಕಲಿ ಔಷಧ ತಯಾರಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಜಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಐದು ಸ್ಥಳಗಳಲ್ಲಿ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿದ್ದಾರೆ.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 2026ರ ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಆಧರಿಸಿ ಇ.ಡಿ. ಈ ಕ್ರಮ ಕೈಗೊಂಡಿದೆ.
ಸಿ.ಕೆ. ತಾಂಡ್ಯ ಗ್ರಾಮದ ವಸತಿ ಪ್ರದೇಶವೊಂದರ ಮೇಲೆ ಔಷಧ ನಿಯಂತ್ರಣ ಪ್ರಾಧಿಕಾರ ಮತ್ತು ಪೊಲೀಸರು ಜಂಟಿ ದಾಳಿ ನಡೆಸಿದಾಗ, ಪರವಾನಗಿ ಇಲ್ಲದ ಔಷಧಗಳನ್ನು ದಾಸ್ತಾನು ಮಾಡಿದ್ದಲ್ಲದೆ, ಅವುಗಳ ಲೇಬಲ್ಗಳನ್ನು ಬದಲಾಯಿಸುತ್ತಿದ್ದ ಆರೋಪಿಗಳು ಪತ್ತೆಯಾಗಿದ್ದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)-2023ರ ಸೆಕ್ಷನ್ 318(4) ಮತ್ತು 1957ರ ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 63ರ ಅಡಿಯಲ್ಲಿ ದಾಖಲಾದ ಅಪರಾಧಗಳು ಪಿಎಂಎಲ್ಎ ವ್ಯಾಪ್ತಿಯ ನಿಗದಿತ ಅಪರಾಧಗಳಾಗಿರುವುದರಿಂದ, ಅಕ್ರಮ ವಹಿವಾಟಿನಿಂದ ಗಳಿಸಿದ ಹಣದ ಮೂಲ ಪತ್ತೆಹಚ್ಚಲು ಇಡಿ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ದಾಖಲಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಆರ್. ಪ್ರಶಾಂತ್, ಬಿಡದಿ ಸಮೀಪದ ಫಾರ್ಮ್ಹೌಸ್ವೊಂದನ್ನು ಗುತ್ತಿಗೆಗೆ ಪಡೆದು, ಯಾವುದೇ ಮಾನ್ಯ ಔಷಧ ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧ ತಯಾರಿಕೆ, ಮರುಪ್ಯಾಕಿಂಗ್ ಮತ್ತು ಲೇಬಲ್ ಬದಲಿಸುವ ಘಟಕ ನಡೆಸುತ್ತಿದ್ದ ಎನ್ನಲಾಗಿದೆ.
ವಿವಿಧ ರಾಜ್ಯಗಳಲ್ಲಿನ ಔಷಧ ತಯಾರಿಕಾ ಘಟಕಗಳಿಂದ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದ್ದ ಜೆನೆರಿಕ್ ಔಷಧಗಳ ಬೃಹತ್ ಪ್ರಮಾಣದ ದಾಸ್ತಾನನ್ನು ಹೊಸ ಗಾಜಿನ ಸೀಸೆಗಳಿಗೆ ವರ್ಗಾಯಿಸಿ, ಬಹುರಾಷ್ಟ್ರೀಯ ಔಷಧ ತಯಾರಿಕಾ ಕಂಪನಿ ಫೈಜರ್ ತಯಾರಿಸುವ ದುಬಾರಿ, ಉನ್ನತ ಗುಣಮಟ್ಟದ ಪ್ರತಿಜೀವಕ ಔಷಧಗಳೆಂದು ಬಿಂಬಿಸಲಾಗುತ್ತಿತ್ತು ಎಂದು ಇ.ಡಿ. ತಿಳಿಸಿದೆ. ಜಾವಿಸೆಫ್ಟಾ ಮತ್ತು ಎಂಬ್ಲಾವಿಯೊ ಸೇರಿದಂತೆ ಫೈಜರ್ನ ಬ್ರ್ಯಾಂಡ್ಗಳ ಹೆಸರಿನಲ್ಲಿ ಈ ಔಷಧಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಲೇಬಲ್ ಬದಲಾಯಿಸಿದ ಈ ಔಷಧಗಳನ್ನು ಎಂ/ಎಸ್ ಡಿಎಂ ಫಾರ್ಮಾಸ್ಯುಟಿಕಲ್ಸ್ ಎಂಬ ವಿತರಕ ಸಂಸ್ಥೆಯ ಮೂಲಕ ಎಂ/ಎಸ್ ಕೃಪಾ ಹೆಲ್ತ್ಕೇರ್ಗೆ ಪೂರೈಸಲಾಗುತ್ತಿತ್ತು. ಬಳಿಕ ಕೃಪಾ ಹೆಲ್ತ್ಕೇರ್ ಸಂಸ್ಥೆಯು ಈ ನಕಲಿ ಔಷಧಗಳ ಸೀಸೆಗಳನ್ನು ಆಸ್ಪತ್ರೆಗಳು ಮತ್ತು ಇತರ ಔಷಧ ಸಂಸ್ಥೆಗಳಿಗೆ ಸರಬರಾಜು ಮಾಡುತ್ತಿತ್ತು.
ಆರೋಗ್ಯ ಸೇವೆ ಒದಗಿಸುವವರು ಹಾಗೂ ನಿಯಂತ್ರಣ ಸಂಸ್ಥೆಗಳ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು, ಅಸಲಿ ಔಷಧಗಳ ಸರಕುಗಳೊಂದಿಗೆ ನಕಲಿ ಔಷಧಗಳನ್ನು ಉದ್ದೇಶಪೂರ್ವಕವಾಗಿ ಬೆರೆಸಿ ಪೂರೈಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.