ಬಸ್ ದರ ಹೆಚ್ಚಳ ಮಾಡಿದ್ದೇಕೆ, ಎಷ್ಟು ಮಾಡಲಾಗಿದೆ: ಸಚಿವ ಭೈರತಿ ಸುರೇಶ್ ಹೇಳಿದ್ದೇನು?

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಮತ್ತು ತುಟ್ಟಿಭತ್ಯೆ, ವಾಹನದ ಬಿಡಿಭಾಗಗಳ ಬೆಲೆ ಹೆಚ್ಚಳ ಹಾಗೂ ನಾಲ್ಕು ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹೇಳಿದರು.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ ಪ್ರಯಾಣ ದರವನ್ನು ಸರಾಸರಿ ಶೇ. 33ರಿಂದ 35ರಷ್ಟು ಹೆಚ್ಚಿಸಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್‌ಗಳ ಟಿಕೆಟ್ ದರವನ್ನು ಸರಾಸರಿ ಶೇ. 23ರಷ್ಟು ಹೆಚ್ಚಿಸಲಾಗುವುದು. ಇಂದು ಬುಧವಾರ ಮಧ್ಯರಾತ್ರಿ ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಮತ್ತು ತುಟ್ಟಿಭತ್ಯೆ, ವಾಹನದ ಬಿಡಿಭಾಗಗಳ ಬೆಲೆ ಹೆಚ್ಚಳ ಹಾಗೂ ನಾಲ್ಕು ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹೇಳಿದರು. ನಿಗಮಗಳ ಒಟ್ಟು ವೆಚ್ಚದಲ್ಲಿ ಸುಮಾರು ಶೇ. 80ರಷ್ಟು ಹಣ ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಕ್ಕೆ ವಿನಿಯೋಗವಾಗುತ್ತದೆ ಎಂದು ತಿಳಿಸಿದರು.

Representational image
ಸಾಮಾನ್ಯ ಜನತೆಗೆ ಬರೆ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಬಸ್ ದರ ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿ ಜಾರಿ

ಬಿಎಂಟಿಸಿ ಪ್ರಯಾಣ ದರವನ್ನು ಶೇ. 90ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಎಸ್‌ಆರ್‌ಟಿಸಿ ಸೇರಿದಂತೆ ಇತರೆ ಮೂರು ನಿಗಮಗಳು ಶೇ. 32ರಿಂದ 34ರಷ್ಟು ದರ ಏರಿಕೆಗೆ ಮನವಿ ಮಾಡಿದ್ದವು. ಆದರೆ, ಸರ್ಕಾರ ಬಿಎಂಟಿಸಿಗೆ ಸರಾಸರಿ ಶೇ. 33ರಿಂದ 35ರಷ್ಟು ಹಾಗೂ ಇತರೆ ಮೂರು ನಿಗಮಗಳಿಗೆ ಶೇ. 23ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಸಚಿವರು ಹೇಳಿದರು.

ಸರ್ಕಾರ ರಚಿಸಿದ್ದ ಸಾರ್ವಜನಿಕ ಸಾರಿಗೆ ಪ್ರಯಾಣ ದರ ನಿಯಂತ್ರಣ ಸಮಿತಿಯು ನಾಲ್ಕು ನಿಗಮಗಳು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಪರಿಶೀಲಿಸಿತ್ತು. ಇಂಧನ ಮತ್ತು ಸಿಬ್ಬಂದಿ ವೆಚ್ಚ, ಬಿಡಿಭಾಗಗಳ ಖರ್ಚು ಹಾಗೂ ಬಾಕಿ ಹೊಣೆಗಾರಿಕೆಗಳನ್ನು ಪರಿಗಣಿಸಿ ಸಮಿತಿ ಅಕ್ಟೋಬರ್ 6ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಿಎಂಟಿಸಿಗೆ ಶೇ. 45ರಷ್ಟು ಹಾಗೂ ಇತರೆ ಮೂರು ಸಾರಿಗೆ ನಿಗಮಗಳಿಗೆ ಶೇ. 28ರಷ್ಟು ವೆಚ್ಚ ಹೆಚ್ಚಳಕ್ಕೆ ಅನುಗುಣವಾಗಿ ದರ ಏರಿಕೆ ಮಾಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ನಾಲ್ಕು ಸಾರಿಗೆ ನಿಗಮಗಳು ಒಟ್ಟಾರೆಯಾಗಿ ಸುಮಾರು 10,200 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಸೆಪ್ಟೆಂಬರ್ 30ರ ವೇಳೆಗೆ ಅವುಗಳ ಒಟ್ಟು ಬಾಕಿ ಹೊಣೆಗಾರಿಕೆ ಮತ್ತು ಸಾಲದ ಮೊತ್ತ 9,912.10 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಸಚಿವರು ತಿಳಿಸಿದರು. ಇದರಲ್ಲಿ ನೌಕರರ ಭವಿಷ್ಯ ನಿಧಿ (PF) ಕೊಡುಗೆಯಾಗಿ ಪಾವತಿಸಬೇಕಿರುವ 2,916.80 ಕೋಟಿ ರೂ, ನಿವೃತ್ತಿ ಸೌಲಭ್ಯಗಳಿಗಾಗಿ 603.88 ಕೋಟಿ ರೂ, ವೇತನ ಪರಿಷ್ಕರಣೆಯ ಬಾಕಿ 664.17 ಕೋಟಿ ರೂ ಹಾಗೂ ಇತರೆ ಸಿಬ್ಬಂದಿ ಪಾವತಿಗಳಿಗಾಗಿ 356.76 ಕೋಟಿ ರೂ ಸೇರಿವೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಒಟ್ಟು ಘನಾಂಶದ ಆಧಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿಸಿದ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆಯನ್ನೂ ಘೋಷಿಸಲಾಗಿದೆ. ನವೆಂಬರ್ 1ರಿಂದ ಪ್ರತಿ ಲೀಟರ್ ಹಾಲಿನ ಮೂಲ ಬೆಲೆಯನ್ನು 8ರೂಪಾಯಿ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು.

ಪ್ರಯಾಣ ದರ ಹೆಚ್ಚಳ

ಹಂತವಾರು ಪರಿಷ್ಕೃತ ಪ್ರಯಾಣ ದರಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಪತ್ರಿಕಾ ಪ್ರಕಟಣೆಯ ಪ್ರಕಾರ, ಬಿಎಂಟಿಸಿಯ ಸಾಮಾನ್ಯ ಬಸ್‌ಗಳಲ್ಲಿ 2 ಕಿ.ಮೀ.ವರೆಗಿನ ಪ್ರಯಾಣಕ್ಕೆ 4 ರೂ ಹಾಗೂ 2ರಿಂದ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ 6 ರೂ ಹೆಚ್ಚುವರಿ ದರ ವಿಧಿಸಲಾಗುತ್ತದೆ. ಇದಕ್ಕಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಗರಿಷ್ಠ 12ರೂಗಳಷ್ಟು ದರ ಹೆಚ್ಚಳವಾಗಲಿದೆ.

ಬಿಎಂಟಿಸಿಯ ಹವಾನಿಯಂತ್ರಿತ ವಜ್ರ ಬಸ್‌ಗಳಲ್ಲಿ 6 ಕಿ.ಮೀ.ವರೆಗಿನ ಪ್ರಯಾಣಕ್ಕೆ 5 ಹಾಗೂ 6ರಿಂದ 18 ಕಿ.ಮೀ.ವರೆಗಿನ ಪ್ರಯಾಣಕ್ಕೆ 10 ಹೆಚ್ಚುವರಿ ದರ ವಿಧಿಸಲಾಗುತ್ತದೆ. ಇದಕ್ಕಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಗರಿಷ್ಠ 15ರಷ್ಟು ದರ ಏರಿಕೆಯಾಗಲಿದೆ.

ಶಕ್ತಿ ಯೋಜನೆಗೂ ದರ ಏರಿಕೆಗೂ ಸಂಬಂಧವಿಲ್ಲ

ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಶಕ್ತಿ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಯೋಜನೆಯಡಿ ಮಹಿಳೆಯರಿಗೆ ವಿತರಿಸುವ ಪ್ರತಿಯೊಂದು ಟಿಕೆಟ್‌ಗೆ ಸರ್ಕಾರವು ಸಾರಿಗೆ ನಿಗಮಗಳಿಗೆ ಹಣ ಮರುಪಾವತಿ ಮಾಡುತ್ತಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಈವರೆಗೆ 16,589 ಕೋಟಿ ರೂ ಮರುಪಾವತಿ ಮಾಡಿದೆ. ಇನ್ನೂ ಸುಮಾರು 5,000 ಕೋಟಿ ರೂ ಬಾಕಿ ಇದೆ ಎಂದು ತಿಳಿಸಿದರು. ಮರುಪಾವತಿ ಬಾಕಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಒಟ್ಟು 6,362 ಕೋಟಿ ರೂ ಪಾವತಿಯಾಗಬೇಕಿದೆ ಎಂದರು.

ಶಕ್ತಿ ಯೋಜನೆಯಡಿ ಪ್ರತಿದಿನ ಸುಮಾರು 74.40 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X