

ಬೆಂಗಳೂರು: ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ನಡೆ ಉದ್ಧಟತನದ ಪರಮಾವಧಿ ಮೀರಿದೆ. ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ.
ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ.
ತಮಿಳುನಾಡಿನಲ್ಲಿ ತಮಿಳು-ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ-ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್ ಧನುಷ್ ಕುಮಾರ್ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ.
ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ. ಸಾಮಾಜಿಕ ಜಾಲತಾಣದಿಂದ ಪೋಸ್ಟ್ ಅಳಿಸಬಹುದು. ಆದರೆ ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನವನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡಿಗರ ಸ್ವಾಭಿಮಾನದ ವಿಷಯದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.