ನವೆಂಬರ್ 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಉದ್ಘಾಟನೆ

ಪ್ರಧಾನಿ ಮೋದಿ ಅವರು ತಾವರೆಕೆರೆ ನಿಲ್ದಾಣದಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಪಿಂಕ್ ಲೈನ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ
Pink Line
ನಮ್ಮ ಮೆಟ್ಕೊ ಪಿಂಕ್ ಲೈನ್
Updated on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್ ಹಾಗೂ ಮೈಸೂರಿನಲ್ಲಿ ವಿಶ್ವದ ಮೊದಲ ಓರೆಯಾದ ಎಲ್‌ಇಡಿ ಡೋಮ್ ತಾರಾಲಯವನ್ನು ಉದ್ಘಾಟಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿ ಅವರು ತಾವರೆಕೆರೆ ನಿಲ್ದಾಣದಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಪಿಂಕ್ ಲೈನ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗ ಸೇರ್ಪಡೆಯೊಂದಿಗೆ, ಬೆಂಗಳೂರಿನ ಮೆಟ್ರೋ ಜಾಲವು ಈಗಿನ 96.1 ಕಿ.ಮೀ.ನಿಂದ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಈ ಮೂಲಕ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲವು 100 ಕಿ.ಮೀ. ಗಡಿ ದಾಟಲಿದ್ದು, ದೆಹಲಿ ಬಳಿಕ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಸೂರ್ಯ ಹೇಳಿದರು.

Pink Line
10 ವರ್ಷದಲ್ಲಿ ಬೆಂಗಳೂರು ಅಭಿವೃದ್ಧಿಗೆ ₹50 ಸಾವಿರ ಕೋಟಿ ಖರ್ಚು; ಆದರೂ ರಸ್ತೆ, ಚರಂಡಿ, ಸಂಚಾರ ಸಮಸ್ಯೆಗಿಲ್ಲ ಮುಕ್ತಿ..!

ನಾಲ್ಕು ತಿಂಗಳ ಅವಧಿಯಲ್ಲಿ ಮೋದಿ ಅವರು ಎರಡನೇ ಬಾರಿಗೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 1ರಂದು ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವಾದ ವಿವೇಕ ಸ್ಮಾರಕವನ್ನು ಉದ್ಘಾಟಿಸಲು ಮೈಸೂರಿಗೆ ಭೇಟಿ ನೀಡಿದ್ದರು. ಅಕ್ಟೋಬರ್ 24ರಂದು ನಿಗದಿಯಾಗಿದ್ದ ಅವರ ಮೈಸೂರು ಭೇಟಿ ಮುಂದೂಡಿಕೆಯಾಗಿತ್ತು.

ವೀರಯೋಧ ಎ.ಪಿ. ಪ್ರಶಾಂತ್ ಪಾರ್ಕ್ ಸಮೀಪದ ಕೆಂಪು ಚೆಲುವಜಮ್ಮಣ್ಣಿ ನಗರದಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಲಾಂಛನದ ಆಕಾರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಮಿಯಾವಾಕಿ ಕಿರು ಅರಣ್ಯವನ್ನೂ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ.

ಹಳದಿ ಮಾರ್ಗದಲ್ಲಿ ತಾಂತ್ರಿಕ ದೋಷ

ನಮ್ಮ ಮೆಟ್ರೋದ ಹಳದಿ ಮಾರ್ಗದ ಎಲ್ಲ ನಿಲ್ದಾಣಗಳಲ್ಲಿನ ಸ್ವಯಂಚಾಲಿತ ರೈಲು ಪ್ರಕಟಣೆ ವ್ಯವಸ್ಥೆ ಹಾಗೂ ನೈಜ ಸಮಯದ ರೈಲು ಮಾಹಿತಿ ಪ್ರದರ್ಶನ ಫಲಕಗಳಲ್ಲಿ ಮಂಗಳವಾರ ಸುಮಾರು ಒಂದು ಗಂಟೆ ಕಾಲ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಾರ, ನಿನ್ನೆ ಸಂಜೆ 4.55ರಿಂದ 5.50ರವರೆಗೆ ಈ ವ್ಯವಸ್ಥೆಗಳು ಕಾರ್ಯನಿರ್ವಹಿಸಲಿಲ್ಲ. ಆದರೆ, ರೈಲು ಸಂಚಾರಕ್ಕೆ ಯಾವುದೇ ಅಡಚಣೆಯಾಗಿರಲಿಲ್ಲ.

ಬಿಎಂಆರ್‌ಸಿಎಲ್ ಮತ್ತು ಇತರ ಸಂಸ್ಥೆಗಳು ಯೋಜನೆಯಲ್ಲಿನ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿಗೆ ವೇಗ ನೀಡಲು ಕೈಗೊಂಡ ಕ್ರಮಗಳಿಂದ ಯೋಜನೆ ನಿಗದಿತ ಹಾದಿಯಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಮೆಟ್ರೋ ಜಾಲವನ್ನು 2027ರ ವೇಳೆಗೆ 170 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.

ನಮ್ಮ ಮೆಟ್ರೋ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ಮೈಸೂರಿಗೆ ತೆರಳಲಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಅಧ್ಯಯನ ಕೇಂದ್ರದಲ್ಲಿ ವಿಶ್ವದ ಮೊದಲ ಓರೆಯಾದ ಎಲ್‌ಇಡಿ ಡೋಮ್ ತಾರಾಲಯವನ್ನು ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X