

ಬೆಂಗಳೂರು: ಜಾರ್ಜ್ ಸೋರೋಸ್‌ನಿಂದ ಹಣ ಪಡೆದು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಒಬ್ಬ ಹತಾಶ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ಮೇಲಿರುವ ಆರೋಪಗಳನ್ನು ಇತರರ ಮೇಲೆ ಹೊರಿಸುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದಾರೆ. ಜಾರ್ಜ್ ಸೋರೋಸ್‌ನಂತಹ ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಪ್ರಶ್ನೆಗಳು ಇಂದು ದೇಶದ ಮುಂದೆ ಇವೆ.
ವಿದೇಶಿ ಸಂಪರ್ಕಗಳ ಬಗ್ಗೆ ಮಾತನಾಡುವುದಾದರೆ, ಪದೇಪದೇ ವಿದೇಶ ಪ್ರವಾಸ ಕೈಗೊಳ್ಳುವ ರಾಹುಲ್ ಗಾಂಧಿಯವರೇ ತಮ್ಮ ವಿದೇಶಿ ಸಂಪರ್ಕಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುವುದು, ದೇಶದ ಆಂತರಿಕ ವಿಚಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸುವುದು ಮತ್ತು ಭಾರತದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದು ಅವರ ರಾಜಕೀಯ ನಡವಳಿಕೆಯಾಗಿದೆ ಎಂದು ಟೀಕಿಸಿದ್ದಾರೆ.
ಜಾರ್ಜ್ ಸೋರೋಸ್ ಹಾಗೂ ಅವರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳ ವಿಚಾರವಾಗಿ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಅದರ ಚಟುವಟಿಕೆಗಳ ಬಗ್ಗೆ ದೇಶದ ಜನತೆಗೆ ಸ್ಪಷ್ಟನೆ ನೀಡುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ, ವಿದೇಶಿ ಹಣದ ಪ್ರಭಾವದಿಂದ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನಗಳು ನಡೆದರೂ ಅವುಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಯತ್ನಗಳ ಬಗ್ಗೆ ದೇಶದ ಜನತೆ ಜಾಗೃತರಾಗಿರಬೇಕು ಎಂದಿದ್ದಾರೆ.
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲು ದೇಶವನ್ನು ಪ್ರೀತಿಸುವ, ದೇಶದ ಹಿತವನ್ನೇ ಉಸಿರಾಗಿಸಿಕೊಂಡಿರುವ ನಾಯಕರು. ವೈಯಕ್ತಿಕ ಸುಖ, ಸ್ವಾರ್ಥ ಮತ್ತು ಅಧಿಕಾರದ ಆಸೆಗಳನ್ನು ಬದಿಗಿಟ್ಟು ತಮ್ಮ ಇಡೀ ಜೀವನವನ್ನು ದೇಶಸೇವೆಗೆ ಮುಡಿಪಾಗಿಟ್ಟಿರುವ ಮಹಾನ್ ನಾಯಕರು.
ಅಂತಹ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಕೇವಲ ಒಬ್ಬ ವ್ಯಕ್ತಿಗೆ ಮಾಡುವ ಅವಮಾನವಲ್ಲ, ಅದು ದೇಶದ ಅಭಿವೃದ್ಧಿಯನ್ನು ಬಯಸುವ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಮಾಡುವ ಅವಮಾನವಾಗಿದೆ.ಸೂರ್ಯನ ತೇಜಸ್ಸಿನ ಮುಂದೆ ಇತರ ಬೆಳಕುಗಳು ಮಂಕಾಗುವಂತೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೇಶಸೇವೆ, ದೂರದೃಷ್ಟಿ ಮತ್ತು ನಾಯಕತ್ವದ ಮುಂದೆ ಇಂತಹ ಕ್ಷುಲ್ಲಕ ಟೀಕೆಗಳಿಗೆ ಯಾವುದೇ ಮಹತ್ವವಿಲ್ಲ ಎಂದು ಹೇಳಿದ್ದಾರೆ.
ಆದ್ದರಿಂದ ಇಂತಹ ವ್ಯರ್ಥ ಆರೋಪಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪ ಮಾಡಿದ್ದಾರೆ. ಆತ್ಮನಿರ್ಭರ ಭಾರತ ನಿರ್ಮಾಣದ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಈ ಮಹತ್ವದ ಸಂಕಲ್ಪಕ್ಕೆ ನಾವೆಲ್ಲರೂ ಸಂಪೂರ್ಣ ಬೆಂಬಲವಾಗಿ ನಿಲ್ಲಬೇಕು. ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಜೊತೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು.
ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು, ಜಾಗತಿಕ ನಾಯಕತ್ವದಲ್ಲಿ ಭಾರತಕ್ಕೆ ಗೌರವಯುತ ಸ್ಥಾನ ದೊರೆಯಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ನನಸಾಗಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಬೊಮ್ಮಾಯಿ ಕರೆ ನೀಡಿದ್ದಾರೆ.