

ಬೆಳಗಾವಿ: ಬೆಳಗಾವಿಯಲ್ಲಿ ರೈತ ಮುಖಂಡರ ಜತೆ ನಡೆಸಿದ ಸಭೆಯ ಬಳಿಕ ಕಬ್ಬಿಗೆ ಪ್ರತಿ ಟನ್‌ಗೆ 3,600 ರೂ. ದರ ನಿಗದಿಪಡಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ.
ಇದಕ್ಕೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ನಾಳೆಯಿಂದಲೇ ಕಾರ್ಖಾನೆಗಳು ಆರಂಭವಾಗಲಿವೆ. ಕಳೆದ ಕೆಲ ದಿನಗಳಿಂದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ದರ ನಿಗದಿ ಸಂಘರ್ಷ ತೀವ್ರಗೊಂಡಿತ್ತು.
"ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಸೂಕ್ತ ದರ ನಿಗದಿ ಮಾಡಲಾಗಿದೆ. ಕಾರ್ಖಾನೆಗಳೂ ಇದಕ್ಕೆ ಸಹಮತ ವ್ಯಕ್ತಪಡಿಸಿವೆ. ಹೀಗಾಗಿ ರೈತ ಮುಖಂಡರು ಹಠ ಬಿಟ್ಟು ಪ್ರತಿಭಟನೆಯನ್ನು ಕೈಬಿಡಬೇಕು ಮತ್ತು ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಮುಂದಾಗಬೇಕು," ಎಂದು ಸಚಿವರು ಮನವಿ ಮಾಡಿದ್ದಾರೆ.
ಈ ನಿರ್ಧಾರದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ತಿಕ್ಕಾಟ ತಣ್ಣಗಾಗಿದ್ದು, ಕಬ್ಬು ನುರಿಸುವ ಹಂಗಾಮು ಸುಗಮವಾಗಿ ಆರಂಭವಾಗುವ ಹಾದಿ ಸುಗಮವಾಗುವ ನಿರೀಕ್ಷೆ ಇದೆ.