ಪೊಲೀಸರ ಮುಂದೆಯೇ ಸುಳ್ಳು ಹೇಳಿ ಸಿಕ್ಕಿಬಿದ್ದ ಧನ್ವೀರ್ ಗೌಡ: ಪರಪ್ಪನ ಅಗ್ರಹಾರ ಜೈಲು ವಿಡಿಯೋ ಲೀಕ್ ಕೇಸ್‌ನಲ್ಲಿ ಧನ್ವೀರ್​​ಗೆ ಸಿಸಿಬಿಯಿಂದ ಮತ್ತೊಂದು ಸಂಕಷ್ಟ!

ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳ ರಾಜಾತಿಥ್ಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್ ಗೌಡ ತಮ್ಮ ಮೊಬೈಲ್ ಫೋನ್ ಅನ್ನು ಫ್ಯಾಕ್ಟರಿ ರಿಸೆಟ್ ಮಾಡಿ ಸಾಕ್ಷ್ಯ ನಾಶಪಡಿಸಿರುವುದು FSL ವರದಿಯಿಂದ ದೃಢಪಟ್ಟಿದೆ. ಆ ಕುರಿತ ವರದಿ ಇಲ್ಲಿದೆ:
Parappana Agrahara video leak case: Actor Dhanveer Gowda factory reset mobile to destroy evidence confirms FSL report
ಪರಪ್ಪನ ಅಗ್ರಹಾರ ಜೈಲು ವಿಡಿಯೋ ಕೇಸ್‌ನಲ್ಲಿ ನಟ ಧನ್ವೀರ್ ಮೊಬೈಲ್ ರಿಸೆಟ್ ರಹಸ್ಯ ಬಯಲುOnline Desk
Updated on: 

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆ ವೇಳೆ ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಜೈಲಿನ ಒಳಗಿನ ವಿಡಿಯೋಗಳನ್ನು ವೈರಲ್ ಮಾಡಿದ ಆರೋಪ ಹೊತ್ತಿರುವ ಧನ್ವೀರ್, ಸಾಕ್ಷ್ಯ ನಾಶಪಡಿಸಲು ತಮ್ಮ ಮೊಬೈಲ್ ಫೋನ್ ಅನ್ನು ರಿಸೆಟ್ ಮಾಡಿದ್ದರು ಎನ್ನಲಾದ ರಹಸ್ಯ ಈಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಕಳೆದ ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗಿನ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಜೈಲಿನ ಹೈ-ಸೆಕ್ಯುರಿಟಿ ಬ್ಯಾರಾಕ್‌ಗಳಲ್ಲಿದ್ದ ಶಂಕಿತ ಉಗ್ರರು, ಅತ್ಯಾಚಾರ ಅಪರಾಧಿ ಉಮೇಶ್ ರೆಡ್ಡಿ ಸೇರಿದಂತೆ ಪ್ರಮುಖ ಕೈದಿಗಳು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವುದು ಹಾಗೂ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿರುವುದು ಈ ವಿಡಿಯೋಗಳಲ್ಲಿ ಬಹಿರಂಗವಾಗಿತ್ತು. ಹಾಗಾಗಿ, ಜೈಲಿನ ಇಂತಹ ಸೂಕ್ಷ್ಮ ವಿಡಿಯೋಗಳನ್ನು ಹೊರಗೆ ತಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದವರ ಹಿಂದೆ ಯಾರು ಇದ್ದಾರೆ ಎಂದು ಪತ್ತೆಹಚ್ಚಲು ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಈ ತನಿಖೆಯ ವೇಳೆ, ನಟ ದರ್ಶನ್ ಅವರ ಆಪ್ತರಾಗಿದ್ದ ನಟ ಧನ್ವೀರ್ ಗೌಡ ಅವರ ಮೊಬೈಲ್ ಮೂಲಕವೇ ಈ ವಿಡಿಯೋಗಳು ಮತ್ತು ದತ್ತಾಂಶಗಳು ಹರಿದಾಡಿವೆ ಎಂಬ ಅನುಮಾನದ ಮೇಲೆ, 2025ರ ನವೆಂಬರ್‌ನಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಪೊಲೀಸರು ಧನ್ವೀರ್ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಾಗ, ಅದರಲ್ಲಿ ಜೈಲಿಗೆ ಸಂಬಂಧಿಸಿದ ಯಾವುದೇ ಫೋಟೋ ಅಥವಾ ವಿಡಿಯೋಗಳು ಇರಲಿಲ್ಲ. ಈ ಬಗ್ಗೆ ಪೊಲೀಸರು ಕೇಳಿದಾಗ, ತಾವು ಯಾವುದೇ ತಪ್ಪು ಮಾಡಿಲ್ಲವೆಂದೂ, ಮೊಬೈಲ್‌ನಲ್ಲಿ ಅಂತಹ ಯಾವುದೇ ದತ್ತಾಂಶ ಇರಲಿಲ್ಲವೆಂದೂ ಧನ್ವೀರ್ ಪೊಲೀಸರ ಸಮ್ಮುಖದಲ್ಲೇ ಸುಳ್ಳು ಹೇಳಿಕೆ ನೀಡಿದ್ದರು.

Parappana Agrahara video leak case: Actor Dhanveer Gowda factory reset mobile to destroy evidence confirms FSL report
ದರ್ಶನ್ ಮನೆ ಮುಂದೆ ಆಟೋಗಳ ಸಾಲು: ಧನ್ವೀರ್ ಹೆಸರಲ್ಲಿ ಅನಾಮಿಕನಿಂದ ಕೊಲೆ ಬೆದರಿಕೆ!

ಆದರೆ, ಧನ್ವೀರ್ ಅವರ ಮೊಬೈಲ್‌ನಲ್ಲಿದ್ದ ಹಳೆಯ ದತ್ತಾಂಶವನ್ನು ಮರುಪಡೆಯಲು ಸಿಸಿಬಿ ಪೊಲೀಸರು ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಬಂದಿರುವ ಎಫ್‌ಎಸ್‌ಎಲ್ ವರದಿಯಲ್ಲಿ, ಧನ್ವೀರ್ ಪೊಲೀಸರಿಗೆ ಫೋನ್ ನೀಡುವ ಮುನ್ನವೇ ಉದ್ದೇಶಪೂರ್ವಕವಾಗಿ ಇಡೀ ಮೊಬೈಲ್ ಅನ್ನು 'ಫ್ಯಾಕ್ಟರಿ ರಿಸೆಟ್' ಮಾಡಿ, ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳು, ವಾಟ್ಸಾಪ್ ಚಾಟ್‌ಗಳು ಮತ್ತು ಪ್ರಮುಖ ಸಾಕ್ಷ್ಯಗಳನ್ನು ಅಳಿಸಿಹಾಕಿರುವುದು ತಾಂತ್ರಿಕವಾಗಿ ದೃಢಪಟ್ಟಿದೆ.

ಮತ್ತೆ ನೋಟಿಸ್ ನೀಡಲು ಸಿಸಿಬಿ ತಯಾರಿ:

ಧನ್ವೀರ್ ಸಾಕ್ಷ್ಯ ನಾಶಪಡಿಸಿರುವ ಕುರಿತು ಸಿಸಿಬಿ ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯದ ಗಮನಕ್ಕೆ ತರಲಿದ್ದಾರೆ. ಸಾಕ್ಷ್ಯ ನಾಶಪಡಿಸಿದ ಹಿನ್ನೆಲೆಯಲ್ಲಿ ಮುಂದಿನ ಕಠಿಣ ಕ್ರಮ ಜರುಗಿಸಲು ಕೋರ್ಟ್‌ಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಜೊತೆಗೆ ನಟ ಧನ್ವೀರ್‌ಗೆ ಮತ್ತೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಕರೆಸಲು ಸಿಸಿಬಿ ತಂಡ ಮುಂದಾಗಿದೆ.

Parappana Agrahara video leak case: Actor Dhanveer Gowda factory reset mobile to destroy evidence confirms FSL report
ನಟ ಧನ್ವೀರ್ ಗೌಡ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಾಲು ಸಾಲು ದೂರುಗಳು ದಾಖಲು!

ಏತನ್ಮಧ್ಯೆ, ನಟ ದರ್ಶನ್ ಜೈಲಿನಲ್ಲಿದ್ದಾಗ ಅವರಿಗೆ ರಾಜಾತಿಥ್ಯ ಸಿಗುತ್ತಿಲ್ಲ ಹಾಗೂ ಅವರು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ, ಜೈಲಿನಲ್ಲಿ ಇತರ ಕೈದಿಗಳು (ಉಗ್ರರು, ಅತ್ಯಾಚಾರಿಗಳು) ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೋಗಳನ್ನು ಹೊರಗೆ ಬಿಟ್ಟು ಜೈಲು ಆಡಳಿತದ ವಿರುದ್ಧ ಆಕ್ರೋಶ ಮೂಡಿಸಲು ಈ ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X