ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ: ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿ IKEA ಸಂಸ್ಥೆಗೆ ಸಿಎಂ ಸಲಹೆ

ಜನರು ಚಿಕಿತ್ಸೆಗಾಗಿ ಬೆಂಗಳೂರು ನಗರಕ್ಕೆ ತೆರಳುವ ಅಗತ್ಯವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ₹15 ಲಕ್ಷದಿಂದ ₹30 ಲಕ್ಷದವರೆಗೆ ವೆಚ್ಚವಾಗುವ ಸಂದರ್ಭಗಳಿದ್ದು, ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯವಾಗಿದೆ
Dk Shivakumar
ಡಿ.ಕೆ ಶಿವಕುಮಾರ್
Updated on: 

ರಾಮನಗರ: ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಈಗ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ. ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳ ಕಾಮಗಾರಿಗಳು ನಡೆಯುತ್ತಿದ್ದು, ನೀರಾವರಿ ಕ್ಷೇತ್ರಕ್ಕೆ ತಾವು ಉಪಮುಖ್ಯಮಂತ್ರಿಯಾಗಿದ್ದಾಗ ₹2,000 ಕೋಟಿ ಅನುದಾನ ನೀಡಲಾಗಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ರಾಮನಗರದ ನಗರದ‌ ಜ್ಯೂನಿಯರ್ ಕಾಲೇಜು‌ ಮೈದಾನದಲ್ಲಿ ಗುರುವಾರ‌ ನಡೆದ ಕನ್ನಡ ರಾಜ್ಯೋತ್ಸವ, ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಸಮಾರಂಭವನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತ ಸಾಕ್ಷಿ ಗುಡ್ಡೆಗಳನ್ನು ನಿರ್ಮಿಸುವುದು ನಮ್ಮ ಉದ್ದೇಶ. ದೇಶದ ಒಂದು ಜಿಲ್ಲೆಯಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳು ಇರುವುದಾದರೆ ಅದು ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಮ್ಮೆ ನಮಗಿದೆ" ಎಂದರು.

"ಜನರು ಚಿಕಿತ್ಸೆಗಾಗಿ ಬೆಂಗಳೂರು ನಗರಕ್ಕೆ ತೆರಳುವ ಅಗತ್ಯವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ₹15 ಲಕ್ಷದಿಂದ ₹30 ಲಕ್ಷದವರೆಗೆ ವೆಚ್ಚವಾಗುವ ಸಂದರ್ಭಗಳಿದ್ದು, ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯವಾಗಿದೆ" ಎಂದರು.

"ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಿಂದೆಯೇ ಅನುಮೋದನೆ ನೀಡಲಾಗಿತ್ತು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅದನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಲಾಗಿತ್ತು. ನಾನು ಬಿಡಲಿಲ್ಲ. ರಾಮನಗರದ ಜನರ ಬೇಡಿಕೆಯಂತೆ ಜಿಲ್ಲೆಯಲ್ಲಿ ಮತ್ತೊಂದು ವೈದ್ಯಕೀಯ ಕಾಲೇಜು ಸ್ಥಾಪನೆಗೂ ಅವಕಾಶ ಕಲ್ಪಿಸಲಾಗಿದೆ" ಎಂದು ತಿಳಿಸಿದರು.

Dk Shivakumar
ನಂದಿನಿ ಮೊಸರು ಬೆಲೆ ಇಳಿಕೆಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ; ಇನ್ನೂ ಜಾರಿಗೆ ತರದ KMF

ಜಿಲ್ಲೆಯ ಹಾಲು ಉತ್ಪಾದಕರ ಬದುಕಿಗೆ ಆರ್ಥಿಕ ಬಲ ನೀಡಲು ಕನಕಪುರದ ಶಿವನಹಳ್ಳಿಯಲ್ಲಿ ಹಾಗೂ ರಾಮನಗರದಲ್ಲಿ ಒಟ್ಟು ₹1,400 ಕೋಟಿ ವೆಚ್ಚದಲ್ಲಿ ಹಾಲಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಗಳು ರೈತರ ಬದುಕಿಗೆ ನೀಡಿದ ಕೊಡುಗೆಗಳಾಗಿದ್ದು, ಈ ಅಭಿವೃದ್ಧಿ ಕಾರ್ಯಗಳನ್ನು ಜನರು ಗಮನಿಸಬೇಕು. ರೈತರ ಕಷ್ಟಗಳನ್ನು ಅರಿತು ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹7 ಹೆಚ್ಚಿಸಲಾಗಿದೆ. ಇದರಲ್ಲಿ ಪ್ರತಿ ಲೀಟರ್‌ಗೆ ₹1 ಅನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ರೈತರ ಬದುಕು ಸುಧಾರಿಸಲು ಸರ್ಕಾರ ಬದ್ಧವಾಗಿದೆ" ಎಂದರು.

ಜಿಲ್ಲೆಯ ಜನರು ಬಾಲಕೃಷ್ಣ, ಯೋಗೇಶ್ವರ್, ಇಕ್ಬಾಲ್, ಹುಸೇನ್ ಸೇರಿದಂತೆ ನಾಲ್ವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ರವಿ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದಾರೆ. ಸುರೇಶ್ ಅವರು ಹಿಂದಿನ ಚುನಾವಣೆಯಲ್ಲಿ ಸೋಲಬೇಕಾದ ಅನಿವಾರ್ಯತೆ ಎದುರಾಯಿತು.

ಆದರೆ ಅವಕಾಶ ಸಿಕ್ಕಾಗ ಜನಪ್ರತಿನಿಧಿಗಳು ಮಾಡಿದ ಕೆಲಸಗಳೇ ಅವರ ಸಾಧನೆಗೆ ಸಾಕ್ಷಿಯಾಗುತ್ತವೆ. ಹಾಲು ಉತ್ಪಾದಕರ ಪರವಾಗಿ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ರೈತರ ಸಂಕಷ್ಟ, ಸಗಣಿ, ಹುಲ್ಲು, ಹಿಂಡಿ ಸೇರಿದಂತೆ ಹೈನುಗಾರಿಕೆಯ ಕಷ್ಟಗಳು ರೈತರಿಗೆ ಮಾತ್ರ ಗೊತ್ತು. ರೈತರ ಬದುಕಿನ ಬಗ್ಗೆ ಮಾತನಾಡುವವರು ಅವರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು" ಎಂದರು.

ರಾಮನಗರ ಪಟ್ಟಣದ ಅಭಿವೃದ್ಧಿಗೆ ಕಳೆದ ವರ್ಷ ₹500 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 100 ಎಕರೆ ಜಮೀನು ಗುರುತಿಸಲಾಗಿದ್ದು, ನಿವೇಶನ ಹಂಚಿಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಈ ಯೋಜನೆಗೆ ಬೇಕಾದ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ. ಮುಂದಿನ ಒಂದು ವರ್ಷದೊಳಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡುವ ಕೆಲಸವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ" ಎಂದು ಹೇಳಿದರು.

Dk Shivakumar
ಗ್ರಾಮೀಣ ಭಾಗದ ಪ್ರತಿ ಮಗುವೂ ಜಾಗತಿಕವಾಗಿ ಸ್ಪರ್ಧಿಸಬೇಕು: ಸರ್ಕಾರಿ ಶಾಲೆ ಮೊದಲ ಆದ್ಯತೆಯಾಗಲಿ: CM ಡಿ.ಕೆ ಶಿವಕುಮಾರ್

ಇದಕ್ಕೂ ಮುನ್ನ ಕನಕಪುರ ರಸ್ತೆಯ ಐಕಿಯ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದಿ ಸಿಎಂ ಶಿವಕುಮಾರ್ ಕರ್ನಾಟಕ ಸಣ್ಣ ಉದ್ಯಮಗಳು ಗುಣಮಟ್ಟದ ಪೀಠೋಪಕರಣ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ಬಳಸಿಕೊಂಡು ಪ್ರೋತ್ಸಾಹಿಸಿ. ಆ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ. ಐಕಿಯಾ ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿ” ಎಂದು ಸಲಹೆ ನೀಡಿದರು.

“ನಾನು ಇದುವರೆಗೂ ಯಾವುದೇ ಮಳಿಗೆಗಳ ಉದ್ಘಾಟನೆಗೆ ಹೋಗಿಲ್ಲ. ನನ್ನ ಮಕ್ಕಳು ಆರಂಭಿಸುವ ಕಟ್ಟಡಗಳ ಉದ್ಘಾಟನೆಗೆ ನಾನು ಹೆಚ್ಚಾಗಿ ಹೋಗುವುದಿಲ್ಲ. ಇದೇ ಮೊದಲ ಬಾರಿಗೆ ಮಳಿಗೆ ಉದ್ಘಾಟನೆಗೆ ಬಂದಿರುವೆ” ಎಂದರು.

“ನಾವು ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಕರ್ನಾಟಕಕ್ಕೆ ಆಹ್ವಾನಿಸುತ್ತಿದ್ದು, ಇಲ್ಲಿ ಅನೇಕ ಅವಕಾಶಗಳನ್ನು ಕಲ್ಪಿಸಿದ್ದೇವೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿದ್ದೇವೆ. ಐಕಿಯಾ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ಐಕಿಯಾ ಸಂಸ್ಥೆ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವೀಡನ್, ಭಾರತ ಹಾಗೂ ಕರ್ನಾಟಕದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು, ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿ. ನಮ್ಮ ಯುವಕರು, ಪ್ರತಿಭಾವಂತರು, ಸುಸಂಸ್ಕೃತರು. ಅವರಿಗೆ ಗ್ರಾಹಕರನ್ನು ಸೆಳೆಯುವ ಮಾರುಕಟ್ಟೆ ಕೌಶಲ್ಯವಿದೆ” ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X