ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: ಈ ರೈಲು ಟಿಕೆಟ್ ದರದಲ್ಲಿ ಭಾರಿ ಇಳಿಕೆ! ಯಾವುದು ಗೊತ್ತಾ?

ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಮಹತ್ವದ ಹಾಗೂ ಖುಷಿಯ ಸುದ್ದಿಯೊಂದು ಸಿಕ್ಕಿದ್ದು, 2027ರ ಜನವರಿ 1 ರಿಂದ ಜಾರಿಗೆ ಬರುವಂತೆ ದೇಶದ ಪ್ರಮುಖ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Casual Images
ರೈಲು ಸಾಂದರ್ಭಿಕ ಚಿತ್ರOnline Desk
Updated on: 

ಬೆಂಗಳೂರು: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಹೊಸ ವರ್ಷದ ಭರ್ಜರಿ ಕೊಡುಗೆ ನೀಡಿದ್ದು, 2027ರ ಜನವರಿ 1 ರಿಂದ ಜಾರಿಗೆ ಬರುವಂತೆ ದೇಶದ 47 ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಅದರಲ್ಲೂ, ನಿಗದಿಪಡಿಸಿದ ಮಾರ್ಗಗಳಲ್ಲಿ ಕನಿಷ್ಠ ವೇಗವನ್ನು ಕಾಯ್ದುಕೊಳ್ಳಲು ವಿಫಲವಾದ ಕಾರಣಕ್ಕಾಗಿ ಈ ರೈಲುಗಳ 'ಸೂಪರ್‌ಫಾಸ್ಟ್' ಸ್ಥಾನಮಾನವನ್ನು ರದ್ದುಗೊಳಿಸಿ, ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸುತ್ತಿರುವುದರಿಂದ ಟಿಕೆಟ್ ದರ ಇಳಿಕೆಯಾಗಲಿದೆ. ಈ ಪಟ್ಟಿಯಲ್ಲಿ ವಿಶ್ವಮಾನವ ಎಕ್ಸ್‌ಪ್ರೆಸ್‌ ಸೂಪರ್‌ಫಾಸ್ಟ್ ಟ್ಯಾಗ್ ರದ್ದು ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಟಿಕೆಟ್ ದರ ಇಳಿಕೆಗೆ ಕಾರಣವೇನು?

ರೈಲ್ವೆ ನಿಯಮಗಳ ಪ್ರಕಾರ, ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಎರಡೂ ದಿಕ್ಕುಗಳಲ್ಲಿ ಕನಿಷ್ಠ ಗಂಟೆಗೆ 55 ಕಿಲೋಮೀಟರ್ ವೇಗದಲ್ಲಿ ಚಲಿಸಬೇಕಾಗುತ್ತದೆ. ಇತ್ತೀಚೆಗೆ ನಡೆಸಿದ ತಪಾಸಣೆಯಲ್ಲಿ ದೇಶದ ಒಟ್ಟು 47 ಸೂಪರ್‌ಫಾಸ್ಟ್ ರೈಲುಗಳು ಈ ನಿಗದಿತ ವೇಗವನ್ನು ತಲುಪಲು ವಿಫಲವಾಗಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ, ಜನವರಿ 1 ರಿಂದ ಈ ರೈಲುಗಳಿಗೆ ನೀಡಲಾಗಿದ್ದ ಸೂಪರ್‌ಫಾಸ್ಟ್ ಸ್ಥಾನಮಾನವನ್ನು ರದ್ದುಗೊಳಿಸಿ, ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಾಗಿ ಮರುವರ್ಗೀಕರಿಸಲಾಗುತ್ತಿದೆ. ಅದರಲ್ಲೂ, ಸೂಪರ್‌ಫಾಸ್ಟ್ ಟ್ಯಾಗ್ ಕಳೆದುಕೊಳ್ಳುವುದರಿಂದ, ಈ ರೈಲುಗಳ ಟಿಕೆಟ್ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಸೂಪರ್‌ಫಾಸ್ಟ್ ಸರ್‌ಚಾರ್ಜ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ. ಇದರ ನೇರ ಲಾಭ ಪ್ರಯಾಣಿಕರ ಜೇಬಿಗೆ ತಲುಪಲಿದೆ.

ಯಾವೆಲ್ಲಾ ರೈಲುಗಳು ಈ ಪಟ್ಟಿಯಲ್ಲಿವೆ?

ದೇಶದ ವಿವಿಧ ರೈಲ್ವೆ ವಲಯಗಳ ಒಟ್ಟು 47 ರೈಲುಗಳು (ಸುಮಾರು 23 ಕ್ಕೂ ಹೆಚ್ಚು ಜೋಡಿ ರೈಲುಗಳು) ಈ ವ್ಯಾಪ್ತಿಗೆ ಬರಲಿದ್ದು, ಪ್ರಮುಖವಾಗಿ ಈ ಕೆಳಗಿನ ರೈಲುಗಳು ಸೇರಿವೆ:

  • ಸೆಂಟ್ರಲ್ ರೈಲ್ವೆ: CSMT-ಪುಣೆ ಪ್ರಗತಿ ಎಕ್ಸ್‌ಪ್ರೆಸ್, LTT-ಅಯೋಧ್ಯಾ ಕಂಟೋನ್ಮೆಂಟ್ ತುಳಸಿ ಎಕ್ಸ್‌ಪ್ರೆಸ್ ಸೇರಿದಂತೆ 18 ಸರ್ವೀಸ್‌ಗಳು.

  • ಈಸ್ಟ್ ಸೆಂಟ್ರಲ್ ರೈಲ್ವೆ: ಸಪ್ತ್ ಕ್ರಾಂತಿ ಎಕ್ಸ್‌ಪ್ರೆಸ್ ಮತ್ತು ಶ್ರಮಜೀವಿ ಎಕ್ಸ್‌ಪ್ರೆಸ್ ಒಳಗೊಂಡಂತೆ 20 ಸೇವೆಗಳು.

  • ಉತ್ತರ ರೈಲ್ವೆ: ತಾನಕ್‌ಪುರ-ದೆಹಲಿ, ಡೆಹ್ರಾಡೂನ್-ಕಾಠ್‌ಗೋಡಮ್ ಸೇರಿದಂತೆ 8 ಮಾರ್ಗಗಳು ಹಾಗೂ ಪೂರ್ಣಗಿರಿ ಜನ್ ಶತಾಬ್ದಿ ಮತ್ತು ಗೋವಾ ಎಕ್ಸ್‌ಪ್ರೆಸ್ ರೈಲುಗಳು ಈ ಪಟ್ಟಿಯಲ್ಲಿವೆ.

Casual Images
BMTC ಬೆನ್ನಲ್ಲೇ KSRTC ಬಸ್ ಪಾಸ್ ದರವೂ ಭಾರಿ ಏರಿಕೆ! ಶೇಕಡಾ 23 ರಷ್ಟು ಏರಿಕೆ ಮಾಡಿದ ಸರ್ಕಾರ

ಕರ್ನಾಟಕ ಪ್ರಯಾಣಿಕರಿಗೆ ಗಮನ:

ಮೈಸೂರು - ಕೆಎಸ್ಆರ್ ಬೆಂಗಳೂರು - ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ಸೇರಿದಂತೆ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಕೆಲವು ಪ್ರಮುಖ ರೈಲುಗಳೂ ಸಹ ಈ ಹೊಸ ಬದಲಾವಣೆಯ ಪಟ್ಟಿಗೆ ಒಳಪಡಲಿವೆ.

  • ಹೊಸ ರೈಲು ಸಂಖ್ಯೆಗಳು (Effective Jan 1, 2027):

    • ರೈಲು ಸಂಖ್ಯೆ 20676 (ಮೈಸೂರು - ಬೆಂಗಳೂರು - ಬೆಳಗಾವಿ) ಇನ್ನು ಮುಂದೆ 16275 ಆಗಿ ಬದಲಾಗಲಿದೆ.

    • ರೈಲು ಸಂಖ್ಯೆ 20675 (ಬೆಳಗಾವಿ - ಬೆಂಗಳೂರು - ಮೈಸೂರು) ಇನ್ನು ಮುಂದೆ 16276 ಆಗಿ ಬದಲಾಗಲಿದೆ.

ವಿಶ್ವಮಾನವ ರೈಲು ಮಾತ್ರವಲ್ಲದೆ, ಕರ್ನಾಟಕದ ಮೂಲಕ ಸಂಚರಿಸುವ ಇನ್ನೂ 8 ಜೋಡಿ (ಒಟ್ಟು 16) ರೈಲುಗಳ ಸಂಖ್ಯೆಯನ್ನು ತಾಂತ್ರಿಕ ಕಾರಣಗಳಿಗಾಗಿ ಬದಲಾಯಿಸಲಾಗುತ್ತಿದೆ. ಆದರೆ ಇವುಗಳ ಸೂಪರ್‌ಫಾಸ್ಟ್ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾಗಿ, ಅವುಗಳ ದರವು ಹಾಗೆ ಇರಲಿದೆ. ಅವು,

  • ಮಾಲ್ಗುಡಿ ಡೈಲಿ ಎಕ್ಸ್‌ಪ್ರೆಸ್ (ಅಶೋಕಪುರಂ/ಮೈಸೂರು - ಕೆಎಸ್ಆರ್ ಬೆಂಗಳೂರು):

    • ರೈಲು ಸಂಖ್ಯೆ 20623 ಇನ್ನು ಮುಂದೆ 16123 ಆಗಿ ಬದಲಾಗಲಿದೆ.

    • ರೈಲು ಸಂಖ್ಯೆ 20624 ಇನ್ನು ಮುಂದೆ 16124 ಆಗಿ ಬದಲಾಗಲಿದೆ.

  • ತಿರುಪತಿ - ಎಸ್‌ಎಂವಿಟಿ ಬೆಂಗಳೂರು ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್:

    • ರೈಲು ಸಂಖ್ಯೆ 22617 ಇನ್ನು ಮುಂದೆ 16627 ಆಗಿ ಬದಲಾಗಲಿದೆ.

  • ಲೋಕಮಾನ್ಯ ತಿಲಕ್ ಟರ್ಮಿನಸ್ (LTT) - ತಿರುವನಂತಪುರಂ ಗರಿಬ್ ರಥ್ ಎಕ್ಸ್‌ಪ್ರೆಸ್: (ಇದು ಕಾರವಾರ, ಉಡುಪಿ ಮತ್ತು ಮಂಗಳೂರು ಜಂಕ್ಷನ್ ಮೂಲಕ ಹಾದುಹೋಗುತ್ತದೆ).

    • ರೈಲು ಸಂಖ್ಯೆ 12201 ಇನ್ನು ಮುಂದೆ 16371 ಆಗಿ ಬದಲಾಗಲಿದೆ.

    • ರೈಲು ಸಂಖ್ಯೆ 12202 ಇನ್ನು ಮುಂದೆ 16372 ಆಗಿ ಬದಲಾಗಲಿದೆ.

  • ಯಶವಂತಪುರ - ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್:

    • ರೈಲು ಸಂಖ್ಯೆ 12257 ಇನ್ನು ಮುಂದೆ 16537 ಆಗಿ ಬದಲಾಗಲಿದೆ.

    • ರೈಲು ಸಂಖ್ಯೆ 12258 ಇನ್ನು ಮುಂದೆ 16538 ಆಗಿ ಬದಲಾಗಲಿದೆ.

ಹಾಗಾದ್ರೆ, ಪ್ರಯಾಣಿಕರು ಏನು ಮಾಡಬೇಕು?

ನೀವು ಜನವರಿ 1, 2027 ಅಥವಾ ಆ ನಂತರದ ದಿನಾಂಕಗಳಿಗೆ ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಲು ಬಯಸಿದರೆ, ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಕೌಂಟರ್‌ನಲ್ಲಿ ಹಳೆಯ ಸಂಖ್ಯೆಯ ಬದಲಾಗಿ ಹೊಸದಾಗಿ ಪರಿಷ್ಕರಿಸಲಾದ ರೈಲು ಸಂಖ್ಯೆಗಳನ್ನು ನಮೂದಿಸಬೇಕಾಗುತ್ತದೆ. ಏತನ್ಮಧ್ಯೆ, ಸಂಖ್ಯೆಗಳು ಬದಲಾದರೂ ರೈಲುಗಳು ನಿಲ್ದಾಣಗಳಿಗೆ ಬರುವ ಮತ್ತು ಹೊರಡುವ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X