

ಮೈಸೂರು: ಮಹಾರಾಜರು ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ, ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ ಎನ್ನುವ ಪ್ರಮೋದಾ ದೇವಿ ಒಡೆಯರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಿಂಹಾಸನ ಅಂಬಾರಿ ಸರ್ಕಾರದ್ದು ಅಂತಾ ಎಲ್ಲಿಯೂ ಹೇಳಿಲ್ಲ. ನಾವು ಬಾಡಿಗೆ ಕೊಡುತ್ತೇವೆ ಎಂದು ಹೇಳಿದೆ. ಅವರು ಅದನ್ನ ಗೌರವಧನ ಅಂದಿದ್ದಾರೆ.
ಇದರಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಅರಮನೆ ಕಟ್ಟಿಸಿದ್ದು ಮಹರಾಜರೇ, ಮಹಾರಾಜರು ಕಟ್ಟಿಸಿಲ್ಲ ಎಂದು ನಾನು ಹೇಳಿಲ್ಲ. ಆದರೆ ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ. ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದರು.
ಸರ್ಕಾರವಾಗಲಿ, ರಾಜಾಡಳಿತವಾಗಲಿ ಜನರ ತರಿಗೆಯಿಂದಲೇ ನಡೆಯುವುದು. ಹೀಗಾಗಿ ಎಲ್ಲವೂ ಜನರಿಗೆ ಸೇರಿದ್ದು. ಪ್ರತಿ ವರ್ಷವೂ ರಾಜಮನೆತನದವರು ಸಹಕಾರ ಕೊಟ್ಟಿದ್ದಾರೆ. ಈ ವರ್ಷ ಒಂದಿಷ್ಟು ಗೊಂದಲ ಆಗಿದೆ. ಮುಂದಿನ ದಿನಗಳಲ್ಲಿ ಅವರು ಸಿಎಂ ಜೊತೆ ಮಾತನಾಡಿ, ಎಲ್ಲಾ ಗೊಂದಲ ಬಗೆಹರಿಸಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಅರಮನೆಯಲ್ಲಿ ಜಟ್ಟಿ ಕಾಳಗ ರದ್ದು ವಿಚಾರ ಕುರಿತು ಮಾತನಾಡಿ, ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಈಗಾಗಲೇ ಕೆಲವರ ಮೇಲೆ ಕರ್ತವ್ಯ ಲೋಪದ ದೂರುಗಳು ಬಂದಿವೆ. ಅಧಿಕಾರಿಗಳ ವರದಿ ಸಂಪೂರ್ಣವಾಗಿ ಬರಲಿ. ವರದಿ ಬಂದ ಮೇಲೆ ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಎಚ್.ಸಿ. ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮುನಿಸಿನ ವಿಚಾರವಾಗಿ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಕಳೆದ ವಾರವೇ ಮಹದೇವಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದರು.
ನವೆಂಬರ್ 26ರಂದು ನಡೆಯಲಿರುವ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ ಸಹಕಾರ ನೀಡುವಂತೆ ಅವರನ್ನು ಆಹ್ವಾನಿಸಿದ್ದೇನೆ. ಮಹದೇವಪ್ಪ ಅವರು ಯಾವುದೇ ರೀತಿಯ ಪ್ರತ್ಯೇಕತೆಯಲ್ಲ. ಕೆಲ ಸಂಘಟನೆಗಳು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು, ಆದರೆ ತಾವು ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮಹದೇವಪ್ಪ ಹೇಳಿದ್ದಾರೆ ಎಂದು ತಿಳಿಸಿದರು.
ಮಹದೇವಪ್ಪ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಉತ್ತಮವಾಗಿದೆ. ರಾಜಕೀಯ ಹಾಗೂ ಸಂಘಟನಾ ಮಟ್ಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅದರಿಂದ ಸಂಬಂಧ ಹಾಳಾಗುವುದಿಲ್ಲ ಎಂದರು.