ಎಥೆನಾಲ್ ಮಿಶ್ರಿತ ಇಂಧನ ಕುರಿತ ದೂರುಗಳ ತನಿಖೆ ನಾಳೆಯೊಳಗೆ ಪೂರ್ಣ: ಸಿಎಂ ಡಿ ಕೆ ಶಿವಕುಮಾರ್; Video

ಈ ಕುರಿತು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದ್ದು, 67 ಸ್ಥಳಗಳಿಂದ ಇಂಧನದ ಮಾದರಿಗಳನ್ನು ಸಂಗ್ರಹಿಸಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
CM D K Shivakumar
ಸಿಎಂ ಡಿ ಕೆ ಶಿವಕುಮಾರ್
Updated on: 

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣದ ಪ್ರಮಾಣಕ್ಕೆ ಸಂಬಂಧಿಸಿದ ವಿವಾದ ಮುಂದುವರಿದಿರುವ ಬೆನ್ನಲ್ಲೇ, ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದನಿಗೂಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರಗಳು ಹಾಗೂ ದಾಖಲೆಗಳೊಂದಿಗೆ ಸಚಿವರೊಬ್ಬರು ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ತಾವು ಈ ವಿಷಯವನ್ನು ರಾಜಕೀಯ ಕಾರಣಗಳಿಗೆ ಪ್ರಸ್ತಾಪಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ವಿರೋಧ ಪಕ್ಷದಲ್ಲಿರುವುದಕ್ಕೆ ಸಂಬಂಧಿಸಿದ ವಿಷಯವಲ್ಲ. ಆರ್. ಅಶೋಕ್ ಅವರಂತೆ ನಾನು ವಿರೋಧ ಪಕ್ಷದ ನಾಯಕನಾಗಿ ಮಾತನಾಡುತ್ತಿಲ್ಲ ಎಂದು ಹೇಳಿದರು.

ಈ ಕುರಿತು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದ್ದು, 67 ಸ್ಥಳಗಳಿಂದ ಇಂಧನದ ಮಾದರಿಗಳನ್ನು ಸಂಗ್ರಹಿಸಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

CM D K Shivakumar
ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಕರ್ನಾಟಕ, ಕೇರಳಕ್ಕೆ ಸ್ವಾತಂತ್ರ್ಯ: ರಾಜಕೀಯ ಮಾಡಬೇಡಿ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

ಸಾವಿರಾರು ವಾಹನಗಳು ಸಮಸ್ಯೆ ಎದುರಿಸುತ್ತಿವೆ ಎಂಬ ದೂರುಗಳು ನಮಗೆ ಬಂದಿವೆ. ವಾಹನಗಳ ಎಂಜಿನ್‌ಗಳು ಪದೇಪದೆ ಸ್ಥಗಿತಗೊಳ್ಳುತ್ತಿವೆ. ಮೈಲೇಜ್ ಕೂಡ ಕಡಿಮೆಯಾಗುತ್ತಿದೆ ಎಂಬ ದೂರುಗಳಿವೆ ಎಂದು ಹೇಳಿದರು.

ಇದಕ್ಕೂ ಮುನ್ನ, ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಸಂಗ್ರಹಿಸಲಾದ E20 ಪೆಟ್ರೋಲ್‌ನ ಎಲ್ಲಾ 893 ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿತ್ತು. ಈ ಮೂಲಕ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿತ್ತು.

CM D K Shivakumar
'ಪಾರದರ್ಶಕವಾಗಿ ಜಂಟಿ ಪರೀಕ್ಷೆ ಮಾಡೋಣ': ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಆರೋಪ ತಳ್ಳಿಹಾಕಿದ ತೈಲ ಕಂಪೆನಿಗಳು

ಕರ್ನಾಟಕದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಈ ಹಿಂದೆ ಮಾಡಿದ್ದ ಆರೋಪಗಳ ಬೆನ್ನಲ್ಲೇ ಕೇಂದ್ರದ ಈ ಸ್ಪಷ್ಟನೆ ಹೊರಬಿದ್ದಿದೆ. ರಾಜ್ಯದ ಕೆಲವು ನಿರ್ದಿಷ್ಟ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿ ಶೇ. 26ರಿಂದ 31ರಷ್ಟು ಎಥೆನಾಲ್ ಮಿಶ್ರಣವಾಗಿದೆ ಎಂದು ಕರ್ನಾಟಕ ಸರ್ಕಾರದ ಇಲಾಖೆ ಹೇಳಿಕೊಂಡಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಮೂರು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಥೆನಾಲ್ ಮಿಶ್ರಣವು ಕಾನೂನುಬದ್ಧ ಮಾರ್ಗಸೂಚಿಗಳ ಅಡಿಯಲ್ಲಿ ನಿಯಂತ್ರಿತ ಹಾಗೂ ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ ಎಂದು ಸ್ಪಷ್ಟಪಡಿಸಿವೆ. ಇದರಲ್ಲಿ ಹಸ್ತಚಾಲಿತ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದೂ ತಿಳಿಸಿವೆ.

ಕರ್ನಾಟಕದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಶೇ. 31ರವರೆಗೆ ತಲುಪಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಶೇ. 20ರಷ್ಟು ಎಥೆನಾಲ್ ಮಿಶ್ರಣಕ್ಕೆ ಕೇಂದ್ರ ಅನುಮೋದನೆ ನೀಡಿದೆ. ವೈಜ್ಞಾನಿಕ ಪುರಾವೆಗಳು ಮತ್ತು ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು ಎಂದು ಹೇಳಿದ್ದರು.

ನಾವು ಶೇ. 20ರಷ್ಟು ಮಿಶ್ರಣಕ್ಕೆ ಅನುಮೋದನೆ ನೀಡಿದ್ದೇವೆ. ವೈಜ್ಞಾನಿಕವಾಗಿ ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿದ ಬಳಿಕವೇ ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ತಾಂತ್ರಿಕ ವಿಚಾರಗಳನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಉದ್ದೇಶಗಳಿಗೆ ತಿರುಚಿದರೆ, ಅಂತಿಮವಾಗಿ ಯಾರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದನ್ನು ನೋಡೋಣ ಎಂದು ಎಚ್ಚರಿಕೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X