ಬಡ ಮಕ್ಕಳ ಕನಸಿಗೆ ಹೊಸ ರೆಕ್ಕೆ: 3 ತಿಂಗಳ ವೇತನ ಮೀಸಲಿಟ್ಟು 22 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ವಿಮಾನಯಾನದ ಆಸೆ ಈಡೇರಿಸಿದ ಮುಖ್ಯಶಿಕ್ಷಕ..!

ಚಡಚಣ ತಾಲೂಕಿನ ಹಳೆ ಧೂಳಖೇಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಿಠ್ಠಲ ಭೈರಗೊಂಡ ಅವರು, ತಮ್ಮ ವೈಯಕ್ತಿಕ ಆದಾಯದಿಂದ ಸುಮಾರು 2ರಿಂದ 3 ಲಕ್ಷ ರೂಪಾಯಿ ಮೀಸಲಿಟ್ಟಿದ್ದಾರೆ.
The students part of the educational tour pose for a picture
ಶಾಲೆಯ ಮುಖ್ಯಶಿಕ್ಷಕಿ ವಿಠ್ಠಲ ಭೈರಗೊಂಡ
Updated on: 

ವಿಜಯಪುರ: ಶಿಕ್ಷಣದ ಮೇಲಿನ ಬದ್ಧತೆ ಮತ್ತು ಮಕ್ಕಳ ಕನಸುಗಳನ್ನು ನನಸಾಗಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ಅಪರೂಪದ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ.

ತಮ್ಮ ಮೂರು ತಿಂಗಳ ವೇತನವನ್ನು ಮೀಸಲಿಟ್ಟು 22 ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ದೇಶದ ರಾಜಧಾನಿ ನವದೆಹಲಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ.

ಚಡಚಣ ತಾಲೂಕಿನ ಹಳೆ ಧೂಳಖೇಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಿಠ್ಠಲ ಭೈರಗೊಂಡ ಅವರು, ತಮ್ಮ ವೈಯಕ್ತಿಕ ಆದಾಯದಿಂದ ಸುಮಾರು 2ರಿಂದ 3 ಲಕ್ಷ ರೂಪಾಯಿ ಮೀಸಲಿಟ್ಟಿದ್ದಾರೆ.

ನಾಲ್ಕು ದಿನಗಳ ಈ ಪ್ರವಾಸದಲ್ಲಿ ಇಬ್ಬರು ಶಿಕ್ಷಕರೂ ವಿದ್ಯಾರ್ಥಿಗಳ ಜತೆ ತೆರಳಲಿದ್ದಾರೆ. ಪ್ರವಾಸಕ್ಕೆ ಆಯ್ಕೆಯಾಗಿರುವ ಮಕ್ಕಳಲ್ಲಿ ನಾಲ್ಕೈದು ಮಂದಿ ವಲಸೆ ಕಾರ್ಮಿಕ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಉದ್ಯೋಗ ಅರಸಿ ಬೇರೆಡೆಗೆ ತೆರಳಿರುವ ಕುಟುಂಬಗಳ ಈ ಮಕ್ಕಳಿಗೆ ವಿಮಾನ ಪ್ರಯಾಣ ಹಾಗೂ ದೇಶದ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿರುವುದು ವಿಶೇಷವಾಗಿದೆ.

ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಸರ್ಕಾರಿ ಶಾಲಾ ಮಕ್ಕಳಿಗೂ ತರಗತಿಯ ನಾಲ್ಕು ಗೋಡೆಗಳನ್ನು ಮೀರಿ ಜಗತ್ತನ್ನು ಅರಿಯುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಭೈರಗೊಂಡ ಅವರು ಈ ಯೋಜನೆಯನ್ನು ರೂಪಿಸಿದ್ದಾರೆ. ಆರ್ಥಿಕ ಅಡಚಣೆಗಳಿಂದಾಗಿ ಮಕ್ಕಳ ಜ್ಞಾನ ಮತ್ತು ಆಸಕ್ತಿಯನ್ನು ವಿಸ್ತರಿಸುವ ಅನುಭವಗಳಿಂದ ಅವರು ವಂಚಿತರಾಗಬಾರದು ಎಂಬುದು ಅವರ ಆಶಯವಾಗಿದೆ.

The students part of the educational tour pose for a picture
ತಿಪಟೂರಿನಲ್ಲಿ ಭೀಕರ ದುರಂತ: ಸ್ಕೂಟರ್ ಮೇಲೆ ಮರ ಬಿದ್ದು ನಿವೃತ್ತ ಶಿಕ್ಷಕ ದಾರುಣ ಸಾವು..!

ನವೆಂಬರ್ 13ರಂದು ಶೈಕ್ಷಣಿಕ ಪ್ರವಾಸ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಸೊಲ್ಲಾಪುರ ಮತ್ತು ಪುಣೆ ಮಾರ್ಗವಾಗಿ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ನಾಲ್ಕು ದಿನಗಳ ಕಾಲ ದೇಶದ ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.

ಪ್ರವಾಸದ ವೇಳಾಪಟ್ಟಿಯಲ್ಲಿ ಕುತುಬ್ ಮಿನಾರ್, ರಾಜ್‌ಘಾಟ್, ಕೆಂಪುಕೋಟೆ, ಇಂದಿರಾ ಪ್ಯಾಲೇಸ್ ಮತ್ತು ಇಂಡಿಯಾ ಗೇಟ್ ಸೇರಿವೆ. ಇದರ ಜತೆಗೆ ಆಗ್ರಾದ ತಾಜ್‌ಮಹಲ್, ಯಮುನಾ ನದಿ, ಫತೇಪುರ್ ಸಿಕ್ರಿ, ಮಥುರಾ ಮತ್ತು ವೃಂದಾವನಕ್ಕೂ ಭೇಟಿ ನೀಡಲಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳೂ ವಿಮಾನದಲ್ಲಿ ಪ್ರಯಾಣಿಸುವ ಕನಸು ಕಾಣುತ್ತಾರೆ. ಅವರು ಪಠ್ಯಪುಸ್ತಕಗಳಲ್ಲಿ ಮಾತ್ರ ಓದಿರುವ ಸ್ಥಳಗಳನ್ನು ಸ್ವತಃ ಕಣ್ತುಂಬಿಕೊಳ್ಳಬೇಕು ಮತ್ತು ಹೊಸ ಅನುಭವಗಳನ್ನು ಪಡೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಭೈರಗೊಂಡ ತಿಳಿಸಿದ್ದಾರೆ.

ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದು, ಪೋಷಕರ ಒಪ್ಪಿಗೆಯನ್ನೂ ಪಡೆದಿದ್ದೇನೆ. ಪ್ರವಾಸದ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತಿದ್ದೇನೆ. ಮಕ್ಕಳ ಕನಸು ನನಸಾಗಿಸುವುದರ ಜತೆಗೆ ಅವರಿಗೆ ಹೊಸ ಕಲಿಕೆಯ ಅನುಭವ ನೀಡುವುದು ನನ್ನ ಆಶಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X