

ಬೆಂಗಳೂರು: ಹುಬ್ಬಳ್ಳಿ ವಿಭಾಗದ ರೈಲ್ವೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ರೈಲಿನಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ 52,500 ರೂ. ನಗದು ಮತ್ತು ಎರಡು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದ ಬ್ಯಾಗ್ ಅನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಪ್ರಯಾಣಿಕನಿಗೆ ಹಿಂದಿರುಗಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನವೆಂಬರ್ 8 ರಂದು ಅರ್ಜುನ್ ಗುರುಸಿದ್ದಪ್ಪ ಟೊಪ್ಪನವರ್ ಮತ್ತು ಅವರ ಪತ್ನಿ ಬೆಂಗಳೂರಿನಿಂದ ಬೆಳಗಾವಿಗೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರೈಲಿನಿಂದ ಇಳಿದ ನಂತರ, ಅವರು ಆಕಸ್ಮಿಕವಾಗಿ ತಮ್ಮ ಬ್ಯಾಗ್ ಅನ್ನು ಎಸಿ ಕೋಚ್‌ನಲ್ಲಿ ಬಿಟ್ಟು ಹೋಗಿದ್ದಾರೆ. ಬ್ಯಾಗ್‌ನಲ್ಲಿ ಅವರ ಎರಡು ಪಾಸ್‌ಪೋರ್ಟ್‌ಗಳು, ವಿದೇಶಿ ಕರೆನ್ಸಿ ಮತ್ತು 52,500 ರೂ. ನಗದು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯ ಹೇಳಿಕೆಯ ಪ್ರಕಾರ, ಕರ್ತವ್ಯದಲ್ಲಿದ್ದ ಬೆಡ್‌ರೋಲ್ ಸಿಬ್ಬಂದಿ ಲಗಮಣ್ಣ ಬ್ಯಾಗ್ ನ್ನು ಗಮನಿಸಿದ್ದು, ತಕ್ಷಣ ಅದನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಅದನ್ನು ಸಂಬಂಧಪಟ್ಟ ಹಿರಿಯ ಸಿಬ್ಬಂದಿಗೆ ಹಸ್ತಾಂತರಿಸಿದ್ದು, ಪ್ರಯಾಣಿಕರ ವಿವರಗಳನ್ನು ಪತ್ತೆಹಚ್ಚಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದಾದ ಮಾರನೇ ದಿನ ಸಾಂಗ್ಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ರೈಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದಾಗ ಅದರ ಕಂಡಕ್ಟರ್ ಆನಂದ್ ಕುಮಾರ್, ಬೆಡ್‌ರೋಲ್ ಸಿಬ್ಬಂದಿಯ ಸಹಾಯದಿಂದ, ಬ್ಯಾಗ್ ಅನ್ನು ಅದರ ನಿಜವಾದ ಮಾಲೀಕ ಟೊಪ್ಪನವರ್ ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಈ ವೇಳೆ ಟೊಪ್ಪನವರ್ ರೈಲ್ವೆ ಸಿಬ್ಬಂದಿಯ ತ್ವರಿತ ಕ್ರಮ, ಪ್ರಾಮಾಣಿಕತೆ, ಬದ್ಧತೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.