ಗಾಣಗಾಪುರ ದತ್ತಾತ್ರೇಯ ಕ್ಷೇತ್ರ ಅಭಿವೃದ್ಧಿಗೆ ₹250 ಕೋಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್- ಪ್ರಿಯಾಂಕ್ ಖರ್ಗೆ

ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Ganagapura dattatreya temple
ಗಾಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರ
Updated on: 

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದು, ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 6 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದರಲ್ಲಿ ₹17.12 ಕೋಟಿ ವೆಚ್ಚದಲ್ಲಿ ಸಂಗಮ ಘಾಟ್ ಅಭಿವೃದ್ಧಿ, ₹12.50 ಕೋಟಿ ವೆಚ್ಚದಲ್ಲಿ ಪಾಪವಿನಾಶ ತೀರ್ಥ, ₹6.50 ಕೋಟಿ ವೆಚ್ಚದಲ್ಲಿ ದೇವಸ್ಥಾನಕ್ಕೆ ಪ್ರೊಮೆನಡ್ ಮಾರ್ಗ, ₹9.10 ಕೋಟಿ ವೆಚ್ಚದಲ್ಲಿ ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ, ₹52 ಲಕ್ಷದಲ್ಲಿ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಪಾದಚಾರಿ ಮಾರ್ಗ ಮತ್ತು ₹4.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ಸಂಕೀರ್ಣ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯ ಅನುಷ್ಠಾನದಿಂದ ಶ್ರೀಕ್ಷೇತ್ರದಲ್ಲಿ ಸುಸಜ್ಜಿತವಾದ ಪ್ರವಾಸಿ ಸ್ನೇಹಿ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಸಂಗಮ ಘಾಟ್‌ನಲ್ಲಿ 17.12 ಕೋಟಿ ವೆಚ್ಚದಲ್ಲಿ 40 ವಾಣಿಜ್ಯ ಮಳಿಗೆಗಳು, ಪಾಪವಿನಾಶ ತೀರ್ಥದಲ್ಲಿ ಫ್ಲೋಟಿಂಗ್ ಜೆಟ್ಟಿ ಮತ್ತು ಸುರಕ್ಷಿತ ಸ್ನಾನ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ. ದೇವಸ್ಥಾನ ಮಾರ್ಗದಲ್ಲಿ 30 ಅಂಗಡಿಗಳು, ಮಾಹಿತಿ ಕೇಂದ್ರ ಮತ್ತು ವಿದ್ಯುತ್ ದೀಪಾಲಂಕಾರ, ಉದ್ಯಾನವನ, ಶೌಚಾಲಯ, ವಿಶ್ರಾಂತಿ ಸ್ಥಳಗಳು ಮತ್ತು ಯಾತ್ರಿಕರಿಗೆ ಅಗತ್ಯ ಮೂಲಸೌಕರ್ಯ, ಅಂಗವಿಕಲರಿಗೆ ವಿಶೇಷ ಪ್ರವೇಶ, ಪ್ರತ್ಯೇಕ ದರ್ಶನ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ,860 ಕಾರುಗಳು, 500 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Ganagapura dattatreya temple
ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹತ್ಯೆಯ ಹಿಂದೆ ಸಂಘ ಪರಿವಾರದ ಕೈವಾಡ: 6 ತಿಂಗಳಲ್ಲಿ ಜೈಲಿಗೆ ಕಳುಹಿಸುತ್ತೇವೆ; RSS ವಿರುದ್ದ ಪ್ರಿಯಾಂಕ್ ಖರ್ಗೆ ಆರೋಪ

ನದಿ ತೀರದ ಸೌಂದರ್ಯೀಕರಣ, ಸುಸಜ್ಜಿತ ಪಾರ್ಕಿಂಗ್ ಮತ್ತು ಆಧುನಿಕ ಮೂಲಸೌಕರ್ಯಗಳೊಂದಿಗೆ ಗಾಣಗಾಪುರವನ್ನು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲ ಒದಗಿಸುವುದರೊಂದಿಗೆ ಕಲಬುರಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ನಮ್ಮ ಉದ್ದೇಶ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X