ಬೆಂಗಳೂರು: ದೀಪಾವಳಿ ಹಬ್ಬವನ್ನು "ಖುಷಿಯೋಂ ಕಾ ಈದ್" (ಸಂತೋಷದ ಹಬ್ಬ) ಎಂದು ಬಣ್ಣಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದ್ದು, ಇದರ ಬೆನ್ನಲ್ಲೇ ತಮ್ಮ ತಂದೆಯ ಹೇಳಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಪ್ರಯೋಗವಾಗಿದ್ದು, ರಾಜ್ಯದ ಭಾಷಾ ವೈವಿಧ್ಯತೆಯನ್ನು ಬಿಜೆಪಿ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ನವೆಂಬರ್ 7ರಂದು ದೀಪಾವಳಿ ಶುಭಾಶಯ ಕೋರಿದ್ದ ಮಲ್ಲಿಕಾರ್ಜುನ ಖರ್ಗೆ, ಹಬ್ಬವನ್ನು 'ಖುಷಿಯೋಂ ಕಾ ಈದ್' (ಸಂತೋಷದ ಹಬ್ಬ) ಎಂದು ಬಣ್ಣಿಸಿದ್ದರು. ಜನರು ಪರಸ್ಪರ ಭಿನ್ನಾಭಿಪ್ರಾಯ ಮತ್ತು ತಪ್ಪು ತಿಳಿವಳಿಕೆಗಳನ್ನು ಬದಿಗಿಟ್ಟು, ಶಾಂತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದರು.
ತಂದೆಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, 'ಖುಷಿಯೊಂಕಾ ಈದ್' ಎಂಬ ಪದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದೆ. ಇದರಲ್ಲಿ ವಿವಾದ ಸೃಷ್ಟಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
"ಇದರಲ್ಲಿ ವಿವಾದವೇನಿದೆ? 'ಖುಷಿಯೊಂಕಾ ಈದ್' ಎಂದರೆ ಸಂತೋಷದ ಹಬ್ಬ ಎಂದರ್ಥ. ಕಲ್ಯಾಣ ಕರ್ನಾಟಕದಾದ್ಯಂತ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಪ್ರಯೋಗವಿದು. ಭಾಷೆಯ ಅರ್ಥ ತಿಳಿಯದವರು ಈ ವಿಚಾರದಲ್ಲಿ ಏಕೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪ್ರಾದೇಶಿಕ ಉಪಭಾಷೆಗಳ ಮೇಲೆ ವಿವಿಧ ಭಾಷೆಗಳ ಪ್ರಭಾವ ಇರುವುದನ್ನು ಉಲ್ಲೇಖಿಸಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡದೊಂದಿಗೆ ಮರಾಠಿ, ಉರ್ದು, ತೆಲುಗು ಹಾಗೂ ತಮಿಳು ಭಾಷೆಗಳ ಪದಗಳು ಬೆರೆತುಕೊಂಡಿವೆ ಎಂದರು.
"ಮುಂಬೈ-ಕರ್ನಾಟಕ ಭಾಗದಲ್ಲಿ ಕನ್ನಡದೊಂದಿಗೆ ಮರಾಠಿ ಪದಗಳು ಬೆರೆತಿವೆ. ನಮ್ಮ ಭಾಗದಲ್ಲಿ ಕನ್ನಡದೊಂದಿಗೆ ಉರ್ದು ಬಳಕೆಯಲ್ಲಿದೆ. ಬೀದರ್ನಲ್ಲಿ ಮರಾಠಿ ಭಾಷೆಯ ಪ್ರಭಾವವಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕನ್ನಡದೊಂದಿಗೆ ತೆಲುಗು ಬೆರೆತಿದೆ. ಬೆಂಗಳೂರಿನಲ್ಲಿಯೂ ಜನರು ಮಾತನಾಡುವಾಗ ಕನ್ನಡದೊಂದಿಗೆ ಇಂಗ್ಲಿಷ್ ಪದಗಳನ್ನು ಬಳಸುತ್ತಾರೆ. ಇದೆಲ್ಲವೂ ಸಂವಹನದ ಭಾಗವಾಗಿದೆ" ಎಂದು ವಿವರಿಸಿದರು.
ಆದರೆ, ಖರ್ಗೆ ಅವರ ಹೇಳಿಕೆಗೆ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
150 ವರ್ಷಗಳ ಇತಿಹಾಸವಿರುವ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೀಪಾವಳಿ ಮತ್ತು ಈದ್ ಮಿಲಾದ್ ನಡುವಿನ ವ್ಯತ್ಯಾಸ ತಿಳಿದಿಲ್ಲವೇ? ಅವರು ಮಾತನಾಡುವಾಗಲೆಲ್ಲ ಅಲ್ಪಸಂಖ್ಯಾತರ ಓಲೈಕೆಯೇ ಪ್ರಮುಖವಾಗಿ ಕಾಣಿಸುತ್ತದೆ. ಹಬ್ಬಗಳ ಶುಭಾಶಯ ಕೋರುವಾಗಲೂ ಯಾವುದೋ ಭಯದಿಂದ ಮಾತನಾಡುತ್ತಿರುವಂತೆ ತೋರುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇದು ಪ್ರಾದೇಶಿಕ ಭಾಷಾ ಬಳಕೆಯ ಹಿನ್ನೆಲೆಯಲ್ಲಿ ಮಾಡಿದ ಹೇಳಿಕೆ ಎಂಬ ಕಾಂಗ್ರೆಸ್ ಸಮರ್ಥನೆಯನ್ನು ಬಿಜೆಪಿ ತಳ್ಳಿಹಾಕಿದೆ.
ಹೈದರಾಬಾದ್-ಕರ್ನಾಟಕ ಅಥವಾ ರಾಜ್ಯದ ಬೇರೆ ಯಾವುದೇ ಭಾಗದ ಜನರಿಗೆ ಈ ಎರಡು ಹಬ್ಬಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ಇದು ಕಲ್ಯಾಣ ಕರ್ನಾಟಕದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಪದಪ್ರಯೋಗ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.