

ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಲು ನಿಮಗ ಮಂಡಳಿಗಳಿಗೆ ನೇಮಕದ ಮೊದಲ ಪಟ್ಟಿ ಪ್ರಕಟವಾಗಿದೆ. ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ನಂತರ ಬಾಕಿ ಇರುವ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
ನೀವೆಲ್ಲರೂ ಮುಂದಿನ ದಿನಗಳಲ್ಲಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟಗಳಲ್ಲಿ, ಭಾರತ ಜೋಡೋ ಸಂಘಗಳಿಗೆ ಸದಸ್ಯರನ್ನು ಮಾಡಬೇಕು. ಗ್ಯಾರಂಟಿ ಸಮಿತಿಗೆ 40 ಸಾವಿರ ಜನರನ್ನು ನೇಮಿಸಿದ್ದು, 20 ಸಾವಿರ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ಸರ್ಕಾರದ ಐದು ಗ್ಯಾರಂಟಿ ಪ್ರಮುಖವಾಗಿದ್ದು, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ. ಇಡೀ ದೇಶ ನಮ್ಮ ಗ್ಯಾರಂಟಿ ಯೋಜನೆಗಳನ್ನು ಗಮನಿಸುತ್ತಿದೆ” ಎಂದರು.
ಎಸ್ಐಆರ್ ವಿಚಾರವಾಗಿ ಪಕ್ಷದ ವತಿಯಿಂದ ಒಂದು ಆಪ್ ಸಿದ್ಧಪಡಿಸಿದ್ದು, ಮತಪಟ್ಟಿಯಿಂದ ಕೈಬಿಡಲಾಗಿರುವ ಅರ್ಹ ಮದಾರರ ಹೆಸರನ್ನು ಮತ್ತೆ ಸೇರಿಸಲು ನಾವು ಆಲೋಚನೆ ಮಾಡಬೇಕು. ಕೆಲಸ ಮಾಡಬೇಕು. ನಾವು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದ್ದೇವೆ” ಎಂದು ಹೇಳಿದರು.
ನಮ್ಮ ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದವರು ನೆಹರು. ಅಂಬೇಡ್ಕರ್ ಅವರು ಸಂವಿಧಾನ ರಚಿಸುವಂತೆ ಅವರನ್ನು ಕಾನೂನು ಮಂತ್ರಿ ಮಾಡಿದ್ದು ನೆಹರು ಅವರು. ದೇಶದಲ್ಲಿ ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗೆ ಬುನಾದಿ ಹಾಕಿದರು. ಶಿಕ್ಷಣ ಕ್ಷೇತ್ರ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅವರ ಕೊಡುಗೆ ನಾವು ಮರೆಯಲು ಸಾಧ್ಯವಿಲ್ಲ. ಮಕ್ಕಳೇ ದೇಶದ ಸಂಪತ್ತು. ಅವರ ಶಿಕ್ಷಣವೇ ದೇಶಕ್ಕೆ ನಿಜವಾದ ಹೂಡಿಕೆ ಎಂದು ಪ್ರತಿಪಾದಿಸಿದರು. ಮಕ್ಕಳ ಕನಸು, ದೇಶಕ್ಕೆ ದೊಡ್ಡ ಭವಿಷ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಮಕ್ಕಳು ಈ ದೇಶದ ಭವಿಷ್ಯ. ಹೀಗಾಗಿ ನನ್ನ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಿ ಎಂದು ಕರೆ ನೀಡಿದ್ದಾರೆ. ಹೀಗಾಗಿ ನಾವೆಲ್ಲರೂ ಇಂದು ಮಕ್ಕಳ ದಿನ ಆಚರಿಸುತ್ತಿದ್ದೇವೆ. ದೇಶದ ಭವಿಷ್ಯ ಗಟ್ಟಿಯಾಗಿರಬೇಕಾದರೆ ಪ್ರತಿ ಮನೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ನೆಹರು ಅವರಿಗೆ ಮಕ್ಕಳೆಂದರೆ ಪ್ರಾಣ. ನಾಳೆ ನಿಮ್ಮದು ಎಂದು ಪಂಡಿತ್ ಜವಾಹರ್ ಲಾಲ್ ನೆಹರು ಅವರು ಮಕ್ಕಳಿಗೆ ಸಂದೇಶ ನೀಡಿದರು” ಎಂದರು.
“ನೆಹರು ಅವರು ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರಿಗೆ ಬರೆದ ಪತ್ರದ ಅಂಶಗಳನ್ನು ಎಲ್ಲರೂ ಓದಬೇಕು. ಈ ದೇಶದ ಸಂವಿಧಾನಕ್ಕೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಅಡಿಪಾಯ ಹಾಕಿದ್ದು, ಆ ಸಂವಿಧಾನದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನೆಹರು ಅವರು ದೇಶ ಛಿದ್ರವಾಗಬಾರದು ಎಂಬ ಉದ್ದೇಶದಿಂದ ಆಗಿನ ಕಾಲದಲ್ಲಿ ದೇಶದಲ್ಲಿದ್ದ 550ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಾಯಿತು. ಅವರ ಈ ಕೊಡುಗೆ ನಮಗೆ ಶಕ್ತಿ ನೀಡಿದೆ” ಎಂದು ತಿಳಿಸಿದರು.
“ನೆಹರು ಅವರ ಪಂಚವಾರ್ಷಿಕ ಯೋಜನೆ ಜತೆಗೆ, ಹೆಚ್ಎಂಟಿ, ಐಟಿಐ, ಇಸ್ರೋ ಸೇರಿದಂತೆ ಎಲ್ಲಾ ಸಾರ್ವಜನಿಕ ಉದ್ದಿಮೆ ಹಾಗೂ ಕೈಗಾರಿಕೆಗಳನ್ನು ಬೆಂಗಳೂರಿನಿಂದಲೇ ಆರಂಭಿಸಿದರು. ಆಮೂಲಕ ದೇಶಕ್ಕೆ ಬುನಾದಿ ಹಾಕಿದ್ದನ್ನು ಕರ್ನಾಟಕದ ಜನತೆ ಮರೆಯಲು ಸಾಧ್ಯವಿಲ್ಲ.
ಅವರ ದೂರದೃಷ್ಟಿ ಹಾಗೂ ತ್ಯಾಗವನ್ನು ಇಡೀ ವಿಶ್ವ ಶ್ಲಾಘಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಬೇಕು. ಈ ದೇಶ ಈ ಮಟ್ಟಕ್ಕೆ ಪ್ರಗತಿಯಾಗಲು ನೆಹರೂ ಅವರ ಮಾರ್ಗದರ್ಶನ ಮಹತ್ವದ್ದಾಗಿದೆ. ಅವರ ಚಿಂತನೆ, ತತ್ವ ಸಿದ್ಧಾಂತಗಳು ನಮಗೆ ದಾರಿ ದೀಪವಾಗಿದೆ” ಎಂದು ತಿಳಿಸಿದರು.
ನೆಹರು ಕುಟುಂಬ ತಮ್ಮ ಆಸ್ತಿಗಳನ್ನು ದೇಶಕ್ಕಾಗಿ ತ್ಯಾಗ ಮಾಡಿದರು. ನೆಹರು ಅವರು ದೊಡ್ಡ ಕುಟುಂಬದಿಂದ ಬಂದಿದ್ದರೂ ಅಲಹಬಾದ್ ಪಾಲಿಕೆ ಅಧ್ಯಕ್ಷರಾಗಿ ಸ್ಥಳೀಯ ಸಂಸ್ಥೆ ಮೂಲಕ ದೇಶದ ಪ್ರಧಾನಮಂತ್ರಿ ಹುದ್ದೆವರೆಗೆ ಬೆಳೆದರು. ಅವರಂತೆ ಕೆಂಗಲ್ ಹನುಮಂತಯ್ಯ, ರಾಜಗೋಪಾಲಚಾರಿ, ಬಿ ಡಿ ಜತ್ತಿ ಅವರು ಸೇರಿದಂತೆ ಅನೇಕ ಮಹನೀಯರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಬೆಳೆದವರು. ಎಲ್ಲರೂ ಶಾಸಕರಾಗಿಯೇ ರಾಜಕೀಯ ಆರಂಭಿಸಬೇಕಿಲ್ಲ. ನಾವೆಲ್ಲರೂ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು. ಸಿದ್ದರಾಮಯ್ಯ ಅವರು ತಾಲ್ಲೂಕು ಬೋರ್ಡ್ ಗೆ ಸದಸ್ಯರಾಗಿದ್ದರು. ಅವರ ಅಭಿವೃದ್ಧಿ ಕೆಲಸ ಒಂದೆರಡಲ್ಲ, ಸಾವಿರಾರು ಕೆಲಸ ಮಾಡಿದ್ದಾರೆ” ಎಂದು ಹೇಳಿದರು.