

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಚಾಲನೆ ನೀಡಿದ ಕಾಳೇನ ಅಗ್ರಹಾರ ಮತ್ತು ಸದ್ದುಗುಂಟೆ ಪಾಳ್ಯದವರೆಗಿನ ನೂತನ ಗುಲಾಬಿ ಮಾರ್ಗದ ಮೆಟ್ರೋ ರೈಲಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಶನಿವಾರ ಪ್ರಯಾಣ ಮಾಡಿದ್ದಾರೆ. ಇದೇ ವೇಳೆ ಸಹಪ್ರಯಾಣಿಕರೊಂದಿಗೆ ಆತ್ಮೀಯವಾಗಿ ಬೆರೆತಿದ್ದಾರೆ.
ಮಧ್ಯಾಹ್ನದ ವೇಳೆ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾಮಾನ್ಯ ಪ್ರಯಾಣಿಕರಂತೆ ಮೆಟ್ರೋ ರೈಲು ಹತ್ತಿ ಸದ್ದುಗುಂಟೆ ಪಾಳ್ಯದವರೆಗೆ ಪ್ರಯಾಣಿಸಿದರು.
ತಮ್ಮೊಂದಿಗೆ ಮುಖ್ಯಮಂತ್ರಿಗಳೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಂಡು ಪ್ರಯಾಣಿಕರು ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದರು.
ಮೆಟ್ರೋ ಬೋಗಿಯಲ್ಲಿದ್ದ ಯುವಕರು, ಮಹಿಳೆಯರು ಸೇರಿದಂತೆ ಹಲವು ಪ್ರಯಾಣಿಕರು ಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿ ಬಂದು ಉಭಯಕುಶಲೋಪರಿ ವಿಚಾರಿಸಿದರು. ಅಲ್ಲದೆ, ಸಿಎಂ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಮುಖ್ಯಮಂತ್ರಿ ಕೂಡ ನಗುಮೊಗದಿಂದಲೇ ಎಲ್ಲರಿಗೂ ಸೆಲ್ಫಿಗೆ ಪೋಸ್ ನೀಡಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾದರು.