

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾಗೌಡ ಅವರು ಕಳೆದ ಗುರುವಾರ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಕಷ್ಟ-ಸುಖ ಮಾತಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹೌದು, ದರ್ಶನ್ ಹಾಗೂ ಪವಿತ್ರಾಗೌಡ ಅವರ ಮಾತುಕತೆಯ ಆಡಿಯೋ ಈಗ ಪ್ರಾಸಿಕ್ಯೂಷನ್ ಗೆ ದೊಡ್ಡ ಅಸ್ತ್ರವಾಗಿದ್ದು, ಎಸ್ ಪಿಪಿ ಇದನ್ನು ನ್ಯಾಯಧೀಶರ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಬ್ಬರ ಮಾತಿನ ರೆಕಾರ್ಡ್ ಕ್ಲಿಪ್ ಅನ್ನು ನ್ಯಾಯಧೀಶರಿಗೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಸ್ ಪಿಪಿ ಸೋಮವಾರ ಈ ವಿಚಾರವನ್ನು ನ್ಯಾಯಧೀಶರ ಗಮನಕ್ಕೆ ತರುವ ಸಾಧ್ಯತೆ ಇದೆ. ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ತಮ್ಮ ಮಾತುಕತೆ ವೈರಲ್ ಆಗಿರುವ ಬಗ್ಗೆ ನಂತರ ಅವರ ಗಮನಕ್ಕೆ ಬಂದಿದ್ದು, ಸಿಬ್ಬಂದಿಯ ಮೂಲಕ ಈ ವಿಚಾರವನ್ನು ಇಬ್ಬರೂ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ.
ಕೋರ್ಟ್ ಹಾಲ್ ನಲ್ಲಿ ಮಾತ್ರ ತಾಂತ್ರಿಕ ಸಮಸ್ಯೆಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಕಟ್ ಆಗಿತ್ತು. ಆದರೆ ವಿಸಿ ಆನ್ ಲೈನ್ ನಲ್ಲಿ ಹಾಗೆಯೇ ಇತ್ತು ಎನ್ನಲಾಗಿದೆ. ಹೀಗಾಗಿ ಕೋರ್ಟ್ ನಲ್ಲಿದ್ದವರಿಗೆ ತಿಳಿಯಲಿಲ್ಲ. ಬದಲಾಗಿ ಆನ್ ಲೈನ್ ಮೂಲಕ ಲಾಗಿನ್ ಆಗಿದ್ದವ್ರಿಗೆ ಇಬ್ಬರ ಮಾತು ಕೇಳಿದೆ. ಆದರೆ ಕೋರ್ಟ್ ಹಾಲ್ ನಲ್ಲಿ ವಿಸಿ ಲಾಗ್ ಔಟ್ ಆಗಿದೆ ಎಂದು ತಿಳಿದು ದರ್ಶನ್ ಮತ್ತು ಪವಿತ್ರಾಗೌಡ ಮಾತನಾಡಿದ್ದರು.