'ಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಏಕೆ; ಆಹಾರ ಸೇವನೆ ಜನರ ಮೂಲಭೂತ ಹಕ್ಕು': ನಿವೃತ್ತ ನ್ಯಾ. ನಾಗಮೋಹನ್‌ ದಾಸ್; Video

ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಆನೇಕಲ್ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿನ ಮಾಂಸದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್
ನ್ಯಾಯಮೂರ್ತಿ ನಾಗಮೋಹನ್ ದಾಸ್
Updated on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಮಾಂಸದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿರುವುದನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ನಿರ್ದೇಶನಗಳು ಸರ್ವಾಧಿಕಾರದ ಅಭಿವ್ಯಕ್ತಿಯಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಆನೇಕಲ್ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿನ ಮಾಂಸದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಈ ಆದೇಶದ ಬೆನ್ನಲ್ಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಹೇಳಿಕೆ ಹೊರಬಿದ್ದಿದೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್
ಇಂದು ಬೆಂಗಳೂರು, ಮೈಸೂರಿಗೆ ಪ್ರಧಾನಿ ಮೋದಿ ಭೇಟಿ; 15,600 ಕೋಟಿ ರೂ ಯೋಜನೆಗಳಿಗೆ ಚಾಲನೆ

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ನಿನ್ನೆ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ 'ವಿಕೇಂದ್ರೀಕರಣ ಮತ್ತು ಯೋಜಿತ ಅಭಿವೃದ್ಧಿ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಮೂರ್ತಿ ದಾಸ್ ಪ್ರತಿಪಾದಿಸಿದರು. ಪ್ರಧಾನಿ ಅವರ ಭೇಟಿ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದರೂ, ಅದನ್ನು ಜನರ ಆಹಾರದ ಆಯ್ಕೆಯ ಮೇಲಿನ ನಿರ್ಬಂಧಗಳಿಗೆ ತಳುಕು ಹಾಕುವುದು ಒಪ್ಪುವಂತಹದ್ದಲ್ಲ ಎಂದು ಹೇಳಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್
ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ ನವ ಮಧ್ಯಮ ವರ್ಗ: ಪ್ರಧಾನಿ ಮೋದಿ; Video

ನಿಮಗೆ ಇಷ್ಟವಿರಲಿ, ಇಲ್ಲದಿರಲಿ, ಪ್ರಧಾನಿ ನಮ್ಮ ರಾಜ್ಯಕ್ಕೆ ಭೇಟಿ ನೀಡುವುದು ನಮಗೆ ಹೆಮ್ಮೆಯ ಸಂಗತಿ. ಅವರು ಬರಲಿ, ಅದರಲ್ಲಿ ತಪ್ಪೇನಿದೆ? ಆದರೆ ಮಾಂಸದಂಗಡಿಗಳನ್ನು ಏಕೆ ಮುಚ್ಚಬೇಕು? ಮದ್ಯದಂಗಡಿಗಳನ್ನು ಮುಚ್ಚಿದ್ದರೆ ಬಹುಶಃ ನನಗೆ ಸ್ವಲ್ಪ ಸಮಾಧಾನವಾಗುತ್ತಿತ್ತು. ಮಟನ್ ಅಂಗಡಿಗಳನ್ನು ಮುಚ್ಚುವುದಕ್ಕೂ ಪ್ರಧಾನಿಯವರ ಭೇಟಿಗೂ ಏನು ಸಂಬಂಧ? ಇದು ಫ್ಯಾಸಿಸಂ(ನಿರಂಕುಶವಾದ) ಅಲ್ಲದೆ ಮತ್ತೇನು?" ಎಂದು ಅವರು ಪ್ರಶ್ನಿಸಿದರು.

ದೇಶದ ಪ್ರಜಾಪ್ರಭುತ್ವದ ಇತಿಹಾಸವನ್ನು ಸ್ಮರಿಸಿದ ನಿವೃತ್ತ ನ್ಯಾಯಮೂರ್ತಿಗಳು, ಫ್ಯಾಸಿಸಂ ಹೊಸ ಹೊಸ ರೂಪಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ ಎಂದು ಎಚ್ಚರಿಸಿದರು.

ಹಲವರ ತ್ಯಾಗದ ಫಲವಾಗಿ ನಾವು ಫ್ಯಾಸಿಸಂ ನ್ನು ಹಿಮ್ಮೆಟ್ಟಿಸಿದ್ದೆವು. ಆದರೆ ಇಂದು ಅದೇ ಫ್ಯಾಸಿಸಂ ಬೇರೆ ಬೇರೆ ಹೆಸರುಗಳಲ್ಲಿ, ವಿಭಿನ್ನ ರೂಪಗಳಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಫ್ಯಾಸಿಸ್ಟ್ ಶಕ್ತಿಗಳು ನಮ್ಮ ಮೇಲೆ ಹೇಗೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ನೀವೆಲ್ಲರೂ ಇಂದು ನೋಡುತ್ತಿದ್ದೀರಿ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಆಹಾರದ ಸ್ವಾತಂತ್ರ್ಯ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.

ಸಸ್ಯಾಹಾರಿಗಳೂ ಇದ್ದಾರೆ ಎಂಬುದನ್ನು ಯಾರೂ ನಿರಾಕರಿಸುವುದಿಲ್ಲ. ಅವರನ್ನು ಗೌರವಿಸೋಣ. ಆಹಾರದ ಹಕ್ಕು ಮೂಲಭೂತ ಹಕ್ಕು. ನೀವು ನಿಮಗೆ ಬೇಕಾದುದನ್ನು ತಿನ್ನಿ, ಅವರು ತಮಗೆ ಬೇಕಾದುದನ್ನು ತಿನ್ನಲಿ, ನಾನು ನನಗೆ ಬೇಕಾದುದನ್ನು ತಿನ್ನುತ್ತೇನೆ. ನಾವು ಏನು ತಿನ್ನಬೇಕು ಎಂದು ನಿರ್ದೇಶನ ನೀಡಲು ನೀವ್ಯಾರು? ಇಂತಹ ನಿರ್ಬಂಧಗಳು ಇಂದು ನಮಗೆ ಬೇಕಾಗಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X