ಎಲೆಕ್ಷನ್ ಮಾದರಿ ಬಿಗಿ ಭದ್ರತೆಯಲ್ಲಿ KAS ಪೂರ್ವಭಾವಿ ಪರೀಕ್ಷೆ; ಬನಿಯನ್‌ನಲ್ಲೇ ಎಕ್ಸಾಂ ಬರೆದ ಯುವಕ!

ಶೇ.59ರಷ್ಟು ಅಭ್ಯರ್ಥಿಗಳು ಅಂದರೆ 87,260 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ಇನ್ನುಳಿದ 59,807 ಅಭ್ಯರ್ಥಿಗಳು ಗೈರಾಗಿದ್ದಾರೆ. ಪ್ರವೇಶಪತ್ರ ಡೌನ್​ಲೋಡ್ ಮಾಡಿದ್ರೂ 27,146 ಅಭ್ಯರ್ಥಿಗಳು ಪರೀಕ್ಷಗೆ ಹಾಜರಾಗಿಲ್ಲ.
87,260 candidates appear for KAS prelim exam on Sunday
ಬನಿಯನ್‌ನಲ್ಲೇ ಎಕ್ಸಾಂ ಬರೆದ ಯುವಕ
Updated on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣ ಭಾರೀ ಸದ್ದು ಮಾಡುತ್ತಿರುವ ಹೊತ್ತಲ್ಲೇ ಭಾನುವಾರ ರಾಜ್ಯಾದ್ಯಂತ ‘ಚುನಾವಣಾ ಮಾದರಿ’ಯ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಪರೀಕ್ಷೆ ಮುಗಿಯುತ್ತಿದ್ದಂತೆಯೇ ಕೆಪಿಎಸ್​​ಸಿ, ಹಾಜರಾತಿ ಅಂಕಿ ಅಂಶ ಪ್ರಕಟಿಸಿದ್ದು, 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 319 ಹುದ್ದೆಗಳ ನೇಮಕಾತಿಗಾಗಿ ನಡೆದ ಈ ಪರೀಕ್ಷೆಗೆ ಒಟ್ಟು 1,47,067 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಈ ಪೈಕಿ 1,14,406 ಅಭ್ಯರ್ಥಿಗಳು ಪ್ರವೇಶಪತ್ರ ಹಾಲ್ ಟಿಕೆಟ್ ಡೌನ್​ಲೋಡ್ ಮಾಡಿಕೊಂಡಿದ್ದರು. ಆದ್ರೆ, ಶೇ.59ರಷ್ಟು ಅಭ್ಯರ್ಥಿಗಳು ಅಂದರೆ 87,260 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ಇನ್ನುಳಿದ 59,807 ಅಭ್ಯರ್ಥಿಗಳು ಗೈರಾಗಿದ್ದಾರೆ. ಪ್ರವೇಶಪತ್ರ ಡೌನ್​ಲೋಡ್ ಮಾಡಿದ್ರೂ 27,146 ಅಭ್ಯರ್ಥಿಗಳು ಪರೀಕ್ಷಗೆ ಹಾಜರಾಗಿಲ್ಲ.

87,260 candidates appear for KAS prelim exam on Sunday
KPSC ನೇಮಕಾತಿ ಹಗರಣ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌, ಕನ್ನಾಳೆ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

ಬೆಂಗಳೂರಿನ 63 ಕೇಂದ್ರಗಳು ಸೇರಿದಂತೆ ರಾಜ್ಯದ 15 ಜಿಲ್ಲೆಗಳ ಒಟ್ಟು 345 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-1 (ಸಾಮಾನ್ಯ ಅಧ್ಯಯನ ಮತ್ತು ಮಾನವಿಕ ವಿಷಯಗಳು) ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಪತ್ರಿಕೆ-2 (ರಾಜ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಅಧ್ಯಯನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ) ಪರೀಕ್ಷೆಗಳು ಜರುಗಿದವು.

ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಭದ್ರತೆ ವಹಿಸಲಾಗಿತ್ತು. ಅಡಿ ಅಡಿಗೂ ಪೊಲೀಸರು ಕಣ್ಗಾವಲು ಇರಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ಹೊರ ಹಾಗೂ ಒಳ ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಪರೀಕ್ಷೆ ಬರೆಯುವ ಅಭ್ಯರ್ಥಿ ಯಾವುದೇ ರೀತಿ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನ ಕೊಂಡೋಯ್ಯುವಂತಿರಲಿಲ್ಲ. ಜೊತೆಗೆ ವಸ್ತ್ರಸಂಹಿತೆ ಕೂಡ ಜಾರಿ ಮಾಡಲಾಗಿತ್ತು. ಹೀಗಾಗಿ ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲೇ ಅಭ್ಯರ್ಥಿಗಳನ್ನ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯ್ತು.

ಅಭ್ಯರ್ಥಿಗಳು ಧರಿಸಿದ ಅಂಗಿ, ಪ್ಯಾಂಟ್ ಕಿವಿ, ಬಾಯಿ ಸೇರಿದಂತೆ ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಪ್ರಮುಖವಾಗಿ ಅನೇಕರು ತುಂಬುತೋಳಿನ ಶರ್ಟ್ ಧರಿಸಿ ಬಂದಿದ್ರು. ಬೇರೆ ವಿಧಿ ಇಲ್ಲದೇ ಅಭ್ಯರ್ಥಿಗಳು ತಮ್ಮ ಫುಲ್ ಸ್ಲೀವ್ ಅನ್ನ ಕಟ್ ಮಾಡಿ ಒಳಗೆ ತೆರಳಿದ್ರು. ಅದರಲ್ಲೂ ಒಬ್ಬ ವಿಶೇಷ ಚೇತನ ಅಭ್ಯರ್ಥಿಯೂ ತನ್ನ ಶರ್ಟ್ ಅನ್ನ ಕತ್ತರಿಸಲು ಇಷ್ಟಪಡದೇ ಕೇವಲ ಬನಿಯನ್ ಧರಿಸಿ ಪರೀಕ್ಷೆ ಬರೆದಿದ್ದಾರೆ.

ಕೆಪಿಎಸ್ ಸಿ ಈ ಬಾರಿ ಪರೀಕ್ಷಾ ಅಕ್ರಮ ತಡೆಯಲು ಹಲವು ಹೊಸ ಪ್ರಯತ್ನಗಳನ್ನು ಮಾಡಿದ್ದು, ಪರೀಕ್ಷೆಯ ಒಎಂಅರ್ ಶೀಟ್‌ನಲ್ಲೂ ಕೂಡ ಬದಲಾವಣೆ ತರಲಾಗಿತ್ತು.

ಸಾಮಾನ್ಯವಾಗಿ ಒಎಂಆರ್ ಶೀಟ್‌ನಲ್ಲಿ ನಾಲ್ಕು ಕಾಲಂಗಳಲ್ಲಿ ಉತ್ತರಿಸಲು ಅವಕಾಶ ಇರುತ್ತಿತ್ತು. ಆದ್ರೆ ಈ ಬಾರಿ ಹೆಚ್ಚುವರಿಯಾಗಿ ಐದನೇ ಕಾಲಂ ಕೂಡ ಸೇರಿಸಲಾಗಿದ್ದು, ಇದರಲ್ಲಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕು. ಅಭ್ಯರ್ಥಿಗಳು ಯಾವುದೇ ರೀತಿ ಕಾಲಂ ಖಾಲಿ ಬಿಡುವಂತೆ ಇರಲಿಲ್ಲ. ಕಾರಣ ಒಂದು ವೇಳೆ ಉತ್ತರ ಬರೆಯದೇ ಖಾಲಿ ಬಿಟ್ಟರೇ ಅಕ್ರಮದ ಸಂದರ್ಭದಲ್ಲಿ ಉತ್ತರ ತುಂಬುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕಡ್ಡಾಯವಾಗಿ ಎಲ್ಲಾ ಪ್ರಶ್ನೆಗೂ ಉತ್ತರ ಬರೆಯಲೇಬೇಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X