

ಬೆಳಗಾವಿ: ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಬೇಕು ಎಂಬುದು ಸರ್ಕಾರದ ಆಶಯ. ಆರ್ಥಿಕವಾಗಿ ಸಬಲವಾಗಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹೆಚ್ಚಿನ ದರ ನೀಡುವುದಕ್ಕೆ ಸರ್ಕಾರದ ಯಾವುದೇ ಆಕ್ಷೇಪವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಹೆಚ್ಚಿನ ದರ ಘೋಷಿಸಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಶನಿವಾರ ಮಾತನಾಡಿದ ಅವರು, ಎಲ್ಲ ಸಕ್ಕರೆ ಕಾರ್ಖಾನೆಗಳೂ ಒಂದೇ ರೀತಿಯ ದರ ನೀಡಬೇಕು ಎಂದು ನಿರೀಕ್ಷಿಸುವುದು ವಾಸ್ತವಿಕವಲ್ಲ ಎಂದರು.
ಪ್ರತಿಯೊಂದು ಸಕ್ಕರೆ ಕಾರ್ಖಾನೆಯಲ್ಲೂ ಸಕ್ಕರೆ ಉತ್ಪಾದನೆಯ ಪ್ರಮಾಣ, ಕಬ್ಬಿನ ಸಕ್ಕರೆ ಇಳುವರಿ, ಸಕ್ಕರೆ ಮಾರಾಟದ ಬೆಲೆ ಹಾಗೂ ಒಟ್ಟಾರೆ ಆರ್ಥಿಕ ಸ್ಥಿತಿ ವಿಭಿನ್ನವಾಗಿರುತ್ತದೆ. ಹೀಗಾಗಿ ಎಲ್ಲ ಕಾರ್ಖಾನೆಗಳೂ ಒಂದೇ ದರ ನೀಡಲು ಸಾಧ್ಯವಿಲ್ಲ ಎಂದು ಜಾರಕಿಹೊಳಿ ವಿವರಿಸಿದರು.
ಟನ್‌ಗೆ ₹3,600 ಮೂಲ ಬೆಲೆ ನಿಗದಿ
ಬೆಳಗಾವಿಯಲ್ಲಿ ಇತ್ತೀಚೆಗೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ನಡೆದ ಮಾತುಕತೆಯನ್ನು ಉಲ್ಲೇಖಿಸಿದ ಸಚಿವರು, ಆ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ಮೂಲ ಬೆಲೆ ನಿಗದಿಪಡಿಸಲಾಗಿತ್ತು ಎಂದು ತಿಳಿಸಿದರು.
ಈಗ ಕೆಲವು ಕಾರ್ಖಾನೆಗಳು ಘೋಷಿಸಿರುವ ದರಗಳು ಈ ಹಿಂದೆ ಮಾತುಕತೆಯಲ್ಲಿ ಒಪ್ಪಿಕೊಂಡಿದ್ದ ನಿರ್ಧಾರದಿಂದ ಹೆಚ್ಚಿನ ವ್ಯತ್ಯಾಸ ಹೊಂದಿಲ್ಲ. ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂಬುದೇ ಸರ್ಕಾರದ ಉದ್ದೇಶ ಎಂದು ಅವರು ಹೇಳಿದರು.