

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ಸೋಮವಾರ ಅಪ್ಪ-ಮಗ ಸಾವಿನಲ್ಲೂ ಒಂದಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ತಿಪ್ಪನಹಟ್ಟಿ ಗ್ರಾಮದ 58 ವರ್ಷದ ಅಮೀನ್ ಸಾಬ್ ಅವರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತಂದೆಯ ಸಾವಿನ ಸುದ್ದಿ ಕೇಳಿ ಅಘಾತ ತಡೆಯಲಾರದೇ ಲೋ ಬಿಪಿಯಿಂದ ಕಿರಿಯ ಮಗ ಸಹ ಸಾವನ್ನಪ್ಪಿದ್ದಾನೆ.
ತಂದೆಯ ಸಾವಿನ ಸುದ್ದಿ ತಿಳಿದ ಎರಡ್ಮೂರು ಗಂಟೆಯಲ್ಲೇ 37 ವರ್ಷದ ಮಗ ಮೆಹಬೂಬ್ ದಾದಾಪೀರ್ ಮೃತಪಟ್ಟಿದ್ದಾನೆ. ಮೃತ ದಾದಾಪೀರ್‌ಗೆ ಕಳೆದ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.
ಈ ಘಟನೆಯಿಂದ ತಿಪ್ಪನಹಟ್ಟಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು, ತಂದೆ ಮತ್ತು ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.